ಉತ್ತರಪ್ರದೇಶ :
ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್‌ಗೆ ರಾಂಪುರ ಸಂಸದ/ಶಾಸಕ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ಮತ್ತು 14 ಲಕ್ಷ ರೂಪಾಯಿ ದಂಡ ವಿಧಿಸಿದೆ. 2016ರಲ್ಲಿ ಎಸ್‌ಪಿ ಸರ್ಕಾರದ ಅವಧಿಯಲ್ಲಿ ರಾಂಪುರದ ಡುಂಗರ್‌ಪುರ ಕಾಲೋನಿ ನಿವಾಸಿಗಳನ್ನು ಬಲವಂತವಾಗಿ ಹೊರಹಾಕಿ, ಲೂಟಿ ಮಾಡಿ, ಬೆದರಿಕೆ ಹಾಕಿದ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.
ಉದ್ದೇಶಪೂರ್ವಕ ಅವಮಾನ, ಕ್ರಿಮಿನಲ್ ಬೆದರಿಕೆ ಮತ್ತು ನೋವುಂಟು ಮಾಡುವ ಕಿಡಿಗೇಡಿತನ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಜಂ ಖಾನ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ರಾಂಪುರ ಪುರಸಭೆಯ ಮಾಜಿ ಅಧ್ಯಕ್ಷ ಅಜರ್ ಅಹಮದ್ ಖಾನ್, ಮಾಜಿ ವೃತ್ತಾಧಿಕಾರಿ ಆಲೆ ಹಸನ್ ಸೇರಿದಂತೆ ಮೂವರಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 2.5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಡುಂಗರ್‌ಪುರ ಕಾಲೋನಿಯಲ್ಲಿನ ಮನೆಗಳನ್ನು ಅಜಂ ಖಾನ್ ಮತ್ತು ಅವರ ಸಹಚರರು ಸರ್ಕಾರಿ ಆಶ್ರಯ ಮನೆಗಳನ್ನು ನಿರ್ಮಿಸಲು ಕೆಡವಿದ್ದರು ಎಂದು ಆರೋಪಿಸಲಾಗಿದೆ. ಬಲವಂತವಾಗಿ ಮನೆಗಳಿಗೆ ನುಗ್ಗಿ ದಾಳಿ ನಡೆಸಿ ಹಣ ಮತ್ತು ವಸ್ತುಗಳನ್ನು ದೋಚಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸರ್ಕಾರ ಬದಲಾದ ನಂತರ 2019ರಲ್ಲಿ ಈ ವಿಷಯದಲ್ಲಿ ಎಫ್‌ಐಆರ್ ದಾಖಲಾಗಿತ್ತು.
76ರ ಹರೆಯದ ಮಾಜಿ ಸಚಿವನ ವಿರುದ್ಧ ಕಳೆದ ಎರಡು ವರ್ಷಗಳಲ್ಲಿ ಇದು ಆರನೇ ಪ್ರಕರಣವಾಗಿದ್ದು, ಶಿಕ್ಷೆಗೆ ಗುರಿಯಾಗಿದ್ದಾರೆ. ಆಜಂ ಖಾನ್ ಪ್ರಸ್ತುತ ಮತ್ತೊಂದು ಅಪರಾಧ ಪ್ರಕರಣದಲ್ಲಿ ಸೀತಾಪುರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.