ಮಂಗಳೂರು:
ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಅಸ್ತಿತ್ವಕ್ಕೆ ಬಂದು ಇಂದಿಗೆ 100 ದಿನಗಳಾಗಿದ್ದು, ಈ 100 ದಿನಗಳಲ್ಲಿ ರಾಜ್ಯದ ಜನರಿಗೆ ವಿಶ್ವಾಸ ತುಂಬುವಂತಹ ಒಂದು ಕೆಲಸವನ್ನೂ ಸರ್ಕಾರವು ಮಾಡಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಮ್ಮಿಶ್ರ ಸರ್ಕಾರವನ್ನು ಆರೋಪಿಸಿದರು.
ರಾಜ್ಯ ಸರಕಾರ ನೂರು ದಿನದಲ್ಲಿ ನೂರು ಸಮಸ್ಯೆಗಳನ್ನು ತಂದೊಡ್ಡಿದೆ. ಸುಭದ್ರ ಸರಕಾರವಾಗಿ ಜನರಲ್ಲಿ ವಿಶ್ವಾಸ ತುಂಬುವ ಯಾವ ಕೆಲಸವನ್ನೂ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡಿದ್ದೇವೆ ಎನ್ನುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ, ಮೀನುಗಾರರು, ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಯ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸರ್ಕಾರ 100 ದಿನಗಳಲ್ಲಿ ರಾಜ್ಯದ ಜನರಿಗೆ ವಿಶ್ವಾಸ ತುಂಬುವಂತಹ ಒಂದು ಕೆಲಸವನ್ನೂ ಮಾಡಿಲ್ಲ. ಯಡಿಯೂರಪ್ಪ ಸಿಎಂ ಆಗುವುದನ್ನು ತಡೆಯಲು ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಡೊಗ್ಗು ಸಲಾಂ ಹೊಡಿದಿರುವುದು ಹಾಸ್ಯಾಸ್ಪದ. ತಾವು ಅಸ್ತಿತ್ವ ಕಳೆದುಕೊಂಡರೂ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಇಂಥ ದೊಂಬರಾಟ ಇನ್ನೆಷ್ಟು ದಿನ ಮುಂದುವರಿಬೇಕು ಎಂದು ಅವರು ಪ್ರಶ್ನಿಸಿದರು.
ಕೊಡಗು ಜಿಲ್ಲೆ ನೆರೆಯಲ್ಲಿ ಕೊಚ್ಚಿ ಹೋದರೂ, ಸಚಿವರು ಎಸ್ಕಾರ್ಟ್‌ನಲ್ಲಿ ಪ್ರೇಕ್ಷಣೀಯ ಸ್ಥಳ ನೋಡುವಂತೆ ಬಂದು ಹೋಗುತ್ತಿದ್ದಾರೆ. ೧೦ ದಿನದಲ್ಲಿ ಸಿದ್ಧ ಮನೆ ಕಟ್ಟಿ ಕೊಡುತ್ತೇವೆ ಎಂದು ಡಿಸಿಎಂ ಡಾ.ಪರಮೇಶ್ವರ ಹೇಳಿದರೂ ಏನೂ ಮಾಡಿಲ್ಲ. ಜನರಿಗೆ ರಸ್ತೆ, ಆಹಾರ, ಉದ್ಯೋಗ ಒದಗಿಸಲು ಇನ್ನೆಷ್ಟು ದಿನ ಬೇಕು. ನೂರು ದಿನ ಸಂಭ್ರಮ ಬಿಟ್ಟು, ಜನಪರವಾಗಿ ಕೆಲಸ ಮಾಡಿ ಎಂದು ಅವರು ಹೇಳಿದರು.
ಸಂಪಾಜೆ ಘಾಟಿ ಮಾರ್ಗದಲ್ಲಿ ವಾಹನ ಸಂಚಾರ ಪುನರಾರಂಭ ಆಗುವುದು ತಡವಾಗಲಿದೆ. ಚಾರ್ಮಾಡಿ ಘಾಟಿಯಲ್ಲಿ ಬೃಹತ್ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಶಿರಾಡಿ ಮಾರ್ಗದಲ್ಲಿ ಭೂಕುಸಿತ ನಿಂತಿದ್ದರೂ, ವಾಹನ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಒಂದು ವಾರದೊಳಗೆ ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಆರಂಭಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶಾಸಕ ವೇದವ್ಯಾಸ ಡಿ.ಕಾಮತ್, ಬಿಜೆಪಿ ಮುಖಂಡರಾದ ರವಿಶಂಕರ ಮಿಜಾರು. ಸಂಜಯ ಪ್ರಭು, ಜಿತೇಂದ್ರ ಕೊಟ್ಟಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಜೋಯ್ಲಸ್ ಡಿಸೋಜ, ವಸಂತ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
