ಬೆಂಗಳೂರು:
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆಯಲು ನಗರದ ಶಾಲೆಯೊಂದು ಆಡಿದ್ದ ಕಳ್ಳಾಟ ಇದೀಗ ಬಯಲಾಗಿದೆ. ಓದಿನಲ್ಲಿ ಹಿಂದಿದ್ದ 10 ವಿದ್ಯಾರ್ಥಿನಿಯರನ್ನು ಅವರ ಪೋಷಕರಿಗೆ ಅರಿವಿಲ್ಲದಂತೆ ಬೇರೊಂದು ಶಾಲೆಗೆ ಆಡಳಿತ ಮಂಡಳಿ ನೋಂದಾಯಿಸಿದ್ದ ಅಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಸಂತ ನಗರದ ಪ್ರತಿಷ್ಠಿತ ಸೇಂಟ್ ಮೇರಿಸ್ ಗರ್ಲ್ಸ್ ಹೈಸ್ಕೂಲ್ ಈ ರೀತಿಯ ಮೋಸ ಮಾಡಿದ್ದು, ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ವಿರುದ್ದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶೇ.100ರಷ್ಟು ಫಲಿತಾಂಶ ಬರಬೇಕೆಂಬ ಧಾವಂತಕ್ಕೆ ಬಿದ್ದ ಈ ಶಾಲೆ 10 ವಿದ್ಯಾರ್ಥಿನಿಯರನ್ನು ಅವರ ಪೋಷಕರ ಗಮನಕ್ಕೆ ತಾರದೆ ಅನಾಥ ಮಕ್ಕಳು ಎಂದು ಸರ್ಕಾರಿ ಶಾಲೆಯಲ್ಲಿ ಅಡ್ಮಿಷನ್ ಮಾಡಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಇಂಟರ್ನಲ್ ಮಾರ್ಕ್ಸ್ ಇಲ್ಲದ ಕಾರಣ ವಿದ್ಯಾರ್ಥಿನಿಯರು ಫೇಲ್ ಆಗಿದ್ದಾರೆ. ಮಕ್ಕಳ ಭವಿಷ್ಯದ ಜತೆ ಆಟವಾಡಿದ ಶಾಲಾ ಆಡಳಿತದ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.
ಎಲ್‌ಕೆಜಿಯಿಂದ ಸೇಂಟ್ ಮೇರಿಸ್ ಗರ್ಲ್ಸ್ ಶಾಲೆಯಲ್ಲಿ ಓದುತ್ತಿರುವ ಸಂತ್ರಸ್ತೆ ವಿದ್ಯಾರ್ಥಿನಿಯೊಬ್ಬರು ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಹಾಲ್ ಟಿಕೆಟ್ ವಿತರಿಸುವ ವೇಳೆ ಶಾಲಾ ಸಿಬ್ಬಂದಿ ಅವರಿಗೆಲ್ಲ ಸರ್ಕಾರಿ ಶಾಲೆಯೊಂದರ, ಬೇರೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವಂತೆ ಸೂಚಿಸಿದ್ದರಂತೆ. ಆಗ ಯಾವುದೇ ಕಾರನ ನೀಡಿ ಸಾಗ ಹಾಕಿದ್ದರಂತೆ. ಆದರೆ ಫಲಿತಾಂಶ ಪ್ರಕಟವಾದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಮಾರ್ಕ್ಸ್ ಕಾರ್ಡ್‌ನಲ್ಲಿ ಇಂಟರ್‌ನಲ್ ಅಸ್ಸೆಸ್‌ಮೆಂಟ್ ಮಾರ್ಕ್ಸ್ ಇಲ್ಲದಿರುವುದು ಕಂಡು ವಿದ್ಯಾರ್ಥಿನಿಯರು ದಂಗಾಗಿದ್ದರು.
