ಕುಶಾಲನಗರ : 104 ವರ್ಷದ ವೃದ್ಧೆಯಿಂದ ಮತದಾನ

ಮಡಿಕೇರಿ

             ನಮೂನೆ 12ರ ಅಡಿ ಹೆಸರು ನೋಂದಾಯಿಸಿದ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಕುಶಾಲನಗರದಲ್ಲಿ 104 ವರ್ಷದ ವೃದ್ಧೆ ಕಾಳಮ್ಮ ಮತದಾನ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

      ಕುಶಾಲನಗರದ ಕಣಿವೆ ಸಮೀಪದ ಭುವನಗಿರಿ ನಿವಾಸಿ, ಕಾಳಮ್ಮ (104) ಮಂಗಳವಾರ ಅಂಚೆ ಪತ್ರದ ಮೂಲಕ ಮತದಾನ ಮಾಡಿದರು. ಕೊಡಗು ಜಿಲ್ಲಾಧಿಕಾರಿಗಳ ಫೇಸ್‌ಬುಕ್ ಪುಟದಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಶಿಥಿಲವಾದ ಮನೆಯಲ್ಲಿ ವಾಸಿಸುತ್ತಿರುವ ಕಾಳಮ್ಮ ತಮ್ಮ ಹಕ್ಕು ಚಲಾವಣೆ ಮಾಡಿದ ಫೋಟೋ ಈಗ ಮೆಚ್ಚುಗೆಗೆ ಪಾತ್ರವಾಗಿದೆ.
     ಕಾಳಮ್ಮ ಮತದಾನ ಮಾಡಿದ ಫೋಟೋ ಬಗ್ಗೆ ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ. ವೃದ್ಧೆಗೆ ಸರಿಯಾ ಮನೆಯ ವ್ಯವಸ್ಥೆ ಮಾಡಲು ಆಗಿಲ್ಲ. ಆದರೆ ಅವರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ ಎಂದುದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

       “ನಾನು ಈ ಮನೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು, ಕೊನೆಯುಸಿರು ಇರುವವರೆಗೂ ಇಲ್ಲಿಯೇ ಇರುತ್ತೇನೆ. ಸೊಸೆ ಮತ್ತು ಮೊಮ್ಮಕ್ಕಳೇ ನನ್ನನ್ನು ನೋಡಿ ಕೊಳ್ಳುತ್ತಿದ್ದಾರೆ. ಆದರೆ, ಅವರೇ ಕಷ್ಟದಲ್ಲಿರುವುದರಿಂದ ಅವರಿಗೆ ಮತ್ತಷ್ಟು ಕಷ್ಟ ಕೊಡಲು ನನಗೆ ಇಷ್ಟ ಇಲ್ಲ. ಅಧಿಕಾರಿಗಳು ಇದೇ ಜಾಗದಲ್ಲಿ ಒಂದು ಸಣ್ಣ ಕೋಣೆಯನ್ನು ನಿರ್ಮಿಸಿಕೊಟ್ಟರೆ ತುಂಬಪುಣ್ಯ ಆಗುತ್ತಿತ್ತು” ಎಂದು ಹೇಳಿದ್ದಾರೆ.

      ಕಾಳಮ್ಮ ಈಗ ಇರುವ ಮನೆಯ ಪಕ್ಕದಲ್ಲಿಯೇ ಹೊಸ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಆಕೆಯ ಪುತ್ರ ತಮ್ಮಯ್ಯ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಮನೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಕಾಳಮ್ಮಗೆ 6 ಮಕ್ಕಳು. ಐದು ಹೆಣ್ಣು ಮಕ್ಕಳು ಬೇರೆ ಊರುಗಳಲ್ಲಿ ಇದ್ದಾರೆ. ಜೊತೆಗ ಇರುವ ಪುತ್ರ ಅನಾರೋಗ್ಯ ಪೀಡಿತನಾಗಿದ್ದಾನೆ.

 
    80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತದಾನ ಮಾಡಬಹುದು. ಮನೆಯಿಂದಲೇ ಮತದಾನ ಮಾಡುವವರ ಹೆಸರನ್ನು ಚುನಾವಣಾಧಿಕಾರಿಗಳು ನಮೂನೆ 12ರ ಅಡಿ ನೋಂದಾಯಿಸಿಕೊಂಡಿದ್ದಾರೆ. ಚುನಾವಣಾ ಅಧಿಕಾರಿಗಳ ತಂಡ ನೋಂದಣಿ ಮಾಡಿಕೊಂಡವರ ಮನೆಗೆ ಆಗಮಿಸುತ್ತದೆ. ಆಗ ಹೆಸರು ನೋಂದಾಯಿಸಿರುವವರು ಮತದಾನ ಮಾಡಬಹುದು.
 
    ಮತ ಹಾಕುವ ಪ್ರಕ್ರಿಯೆ ಬಿಟ್ಟು ಉಳಿದ ಪ್ರಕ್ರಿಯೆ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ರಾಜ್ಯದಲ್ಲಿ ಈ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಡಗು ಜಿಲ್ಲೆಯಲ್ಲಿ ಒಟ್ಟು 2,474 ಮಂದಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೇ 6ರ ತನಕ ಹೆಸರು ನೋಂದಣಿ ಮಾಡಿಕೊಂಡವರು ಮನೆಯಿಂದಲೇ ಮಾತದಾನ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.
 
ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಮೇ 10ರ ಬುಧವಾರ ನಡೆಯಲಿದೆ. ಈಗಾಗಲೇ ಮನೆಯಿಂದ ಮತದಾನ ಮತ್ತು ಅಂಚೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಸಾಮಾನ್ಯ ಮತದಾರರು ಬುಧವಾರ ಬೆಳಗ್ಗೆ 7 ರಿಂದ ಸಂಜೆ 6ರ ತನಕ ಮತದಾನ ಮಾಡಲು ಅವಕಾಶವಿದೆ. ಚುನಾವಣಾ ಫಲಿತಾಂಶ ಮೇ 13ರಂದು ಪ್ರಕಟವಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap