ಉತ್ತರಾಖಂಡ:
ಉತ್ತರಾಖಂಡ ರಾಜ್ಯದ ರುದ್ರಪ್ರಯಾಗದಲ್ಲಿ 18 ಜನರು ಇದ್ದ ಬಸ್ಸೊಂದು ನಿಯಂತ್ರಣ ತಪ್ಪಿ ಅಲಕನಂದಾ ನದಿಗೆ ಉರುಳಿದೆ. ಬಸ್ ಬಿದ್ದ ನಂತರ 11 ಜನರು ಕಾಣೆಯಾಗಿದ್ದಾರೆ. ಇವರು ನದಿಯಲ್ಲಿ ಕೊಚ್ಚಿಹೋಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸ್, ಆಡಳಿತ ಮತ್ತು ವಿಪತ್ತು ನಿರ್ವಹಣಾ ವಿಭಾಗದ ಉನ್ನತ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಏರುದಾರಿಯಲ್ಲಿ ಬಸ್ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಬಸ್ಸಿನಲ್ಲಿ 18 ಪ್ರಯಾಣಿಕರಿದ್ದರು. ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 10 ಜನರು ಕಾಣೆಯಾಗಿದ್ದಾರೆ. ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಕಾರ್ಯಾಚರಣೆಯಲ್ಲಿ ಏಳು ಜನರನ್ನು ರಕ್ಷಿಸಲಾಗಿದೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಸ್ ಬಿದ್ದಿದೆ. ಪೊಲೀಸರು ಮತ್ತು ವಿಪತ್ತು ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿವೆ. ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಒಬ್ಬ ಪ್ರಯಾಣಿಕ ಮೃತಪಟ್ಟಿರುವುದು ಪತ್ತೆಯಾಗಿದೆ. ಅನಾಹುತದ ಸ್ಥಳದ ವಿಡಿಯೋಗಳು ದೊರೆತಿದ್ದು, ಬೆಟ್ಟದ ಮೇಲೆ ಜನರು ಮಾನವ ಸರಪಳಿ ನಿರ್ಮಿಸಿ ಗಾಯಗೊಂಡ ಪ್ರಯಾಣಿಕರಿಗೆ ಸಹಾಯ ಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.








