ಅಮೇಥಿ:
ಉತ್ತರ ಪ್ರದೇಶದ ಅಮೇಥಿಯ ಗೌರಿಗಂಜ್ ಪ್ರದೇಶದಲ್ಲಿರುವ ಕಾಂಗ್ರೆಸ್ ಕಚೇರಿಯ ಹೊರಗೆ ನಿಲ್ಲಿಸಿದ್ದ ಸುಮಾರು ಹನ್ನೆರಡು ವಾಹನಗಳನ್ನು ಕೆಲವು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ ಎಂದು ಪಕ್ಷ ಹೇಳಿಕೊಂಡಿದೆ.
ಕಾಂಗ್ರೆಸ್ ಜಿಲ್ಲಾ ವಕ್ತಾರ ಅನಿಲ್ ಸಿಂಗ್, ನಿನ್ನೆ ಭಾನುವಾರ ರಾತ್ರಿ ನಡೆದ ದಾಳಿ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಕಾರಿನೊಳಗೆ ಕುಳಿತಿದ್ದ ಕೆಲವರಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ಕಾರಿನಲ್ಲಿ ಬಂದ ಆರು ಮಂದಿ ವಾಹನಗಳಿಗೆ ಹಾನಿ ಮಾಡಿದ್ದಾರೆ. ಕೆಲವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಸಿಂಗ್ ಹೇಳಿದರು. ಇದು ಬಿಜೆಪಿಯ ಹತಾಶೆಯನ್ನು ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಘಟನೆ ರಾಜ್ಯ ಪೊಲೀಸರ ನಿರ್ಲಕ್ಷ್ಯದ ಪರಿಣಾಮ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರದೀಪ್ ಸಿಂಘಾಲ್ ಆರೋಪಿಸಿದ್ದಾರೆ.
ಗೌರಿಗಂಜ್ ಉಪ ಪೊಲೀಸ್ ವರಿಷ್ಠಾಧಿಕಾರಿ ಮಯಾಂಕ್ ದ್ವಿವೇದಿ, ಈ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಟ್ವೀಟ್ ಮಾಡಿರುವ ಕಾಂಗ್ರೆಸ್,ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಮೃತಿ ಇರಾನಿ ಮತ್ತು ಬಿಜೆಪಿ ಕಾರ್ಯಕರ್ತರು ಭಯಭೀತರಾಗಿದ್ದಾರೆ.
ತಾವು ಕಂಡ ಸೋಲಿನಿಂದ ಹತಾಶರಾದ ಬಿಜೆಪಿ ಗೂಂಡಾಗಳು ಲಾಠಿ ಮತ್ತು ರಾಡ್‌ಗಳೊಂದಿಗೆ ಅಮೇಥಿಯ ಕಾಂಗ್ರೆಸ್ ಕಚೇರಿಯ ಹೊರಗೆ ಬಂದು ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ ಎಂದಿದ್ದಾರೆ.ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಮೇಥಿ ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ದಾಳಿಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಸ್ಥಳೀಯರ ವಾಹನಗಳಿಗೂ ಹಾನಿಯಾಗಿದೆ. ಇಡೀ ಘಟನೆಯಲ್ಲಿ ಪೊಲೀಸ್ ಆಡಳಿತ ಮೂಕಪ್ರೇಕ್ಷಕನಾಗಿ ಉಳಿದಿದೆ ಎಂದಿದ್ದಾರೆ.
ಅಮೇಥಿಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಲಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಬಿಜೆಪಿ ಬೆಂಬಲಿಗರು ಅಶಿಸ್ತಿನ ವರ್ತನೆಯಲ್ಲಿ ತೊಡಗಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಆರೋಪಿಸಿದ್ದಾರೆ.