ಬೆಂಗಳೂರು:
ಬಾಯಲ್ಲಿ ಪಾನ್ ಹಾಕಿಕೊಂಡ ಕೂಡಲೇ ಹೊಗೆ ಬರುವ ಲಿಕ್ವಿಡ್ ನೈಟ್ರೋಜನ್ ಪಾನ್ ಇತ್ತೀಚೆಗೆ ಟ್ರೆಂಡ್ ಆಗಿದೆ. ಆದರೆ, ಇದನ್ನು ಸೇವಿಸಿದ 12 ವರ್ಷದ ಬಾಲಕಿಯೊಬ್ಬಳ ಹೊಟ್ಟೆಯಲ್ಲಿ ರಂಧ್ರವಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಬಾಲಕಿಯನ್ನು ಇಂಟ್ರಾಆಪರೇಟಿವ್ ಒಜಿಡಿ ಸ್ಕೋಪಿಯೊಂದಿಗೆ ಪರಿಶೋಧನಾತ್ಮಕ ಲ್ಯಾಪರೊಟಮಿಗೆ ಒಳಪಡಿಸಲಾಯಿತು. ಅಲ್ಲಿ ಅನ್ನನಾಳ, ಹೊಟ್ಟೆ ಮತ್ತು ಡ್ಯುವೋಡೆನಮ್ ಅನ್ನು ಪರೀಕ್ಷಿಸಲು ಎಂಡೋಸ್ಕೋಪ್ ಬಳಸಲಾಯಿತು. ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಸುಮಾರು 4×5 ಸೆಂ.ಮೀ ಅಳತೆಯ ಅನಾರೋಗ್ಯಕರ ಪ್ಯಾಚ್ ಕಂಡುಬಂದಿದೆ.
ನಂತರ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ಹೊಟ್ಟೆಯ ಒಂದು ಭಾಗವನ್ನು ತೆಗೆದುಹಾಕಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಎರಡು ದಿನ ಐಸಿಯುನಲ್ಲಿದ್ದ ಬಾಲಕಿ, 6 ದಿನಗಳ ಆಸ್ಪತ್ರೆ ಮೇಲ್ವಿಚಾರಣೆ ಬಳಿಕ ಮನೆಗೆ ಮರಳಿದ್ದಾಳೆ.
ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಯ ಆಪರೇಟಿಂಗ್ ಸರ್ಜನ್ ಡಾ.ವಿಜಯ್ ಎಚ್.ಎಸ್ ಮಾತನಾಡಿ, ದೇಶದ ವಿವಿಧ ಭಾಗಗಳಿಂದ ಇಂತಹ ಹಲವಾರು ಪ್ರಕರಣಗಳು ವರದಿಯಾಗಿವೆಯ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.
ಲಿಕ್ವಿಡ್ ನೈಟ್ರೋಜನ್ (ದ್ರವ ಸಾರಜನಕ) ಗಮನಾರ್ಹವಾದ ಆರೋಗ್ಯ ಅಪಾಯಗಳನ್ನು ಉಂಟು ಮಾಡುತ್ತದೆ. ಅದು ಸುತ್ತುವರಿದ ಜಾಗದಲ್ಲಿ ಆವಿಯಾದಾಗ, ಅಪಾರ ಪ್ರಮಾಣದ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಸಂದರ್ಭದಲ್ಲಿ ಚರ್ಮವನ್ನು ಹಾನಿಗೊಳಿಸುತ್ತದೆ ಮತ್ತು ತೀವ್ರ ಆರೋಗ್ಯ ಬೆದರಿಕೆಗಳನ್ನು ಉಂಟು ಮಾಡುತ್ತದೆ. ಈ ಆವಿಯನ್ನು ಉಸಿರಾಡುವುದರಿಂದ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಅಂಗಾಂಶ ಹಾನಿಯ ವರದಿಗಳೂ ಇವೆ ಎಂದು ಆರೋಗ್ಯ ತಜ್ಞರು ವಿವರಿಸಿದರು.
ಕಾಟನ್ ಕ್ಯಾಂಡಿ ನಿಷೇಧ, ಗೋಬಿ ಮಂಚೂರಿಯಲ್ಲಿ ಬಣ್ಣ ಬಳಕೆ ನಿಷೇಧದ ಬಳಿಕ ಲಿಕ್ವಿಡ್ ನೈಟ್ರೋಜನ್(ದ್ರವ ಸಾರಜನಕ) ಬಳಕೆಯ ಮೇಲೂ ಕಡಿವಾಣ ಹಾಕುವಂತೆ ಆಗ್ರಹಗಳು ಕೇಳಿ ಬರುತ್ತಿವೆ.
ಆಹಾರವನ್ನು ತಕ್ಷಣ ತಣ್ಣಗೆ ಮಾಡುವುದಕ್ಕೆ ಜೀವಕ್ಕೂ ಅಪಾಯವಿರುವ ಈ ಲಿಕ್ವಿಡ್ ನೈಟ್ರೋಜನ್’ನ್ನು ಬಳಕೆ ಮಾಡಲಾಗುತ್ತಿದೆ. ಸ್ಮೋಕ್ ಬಿಸ್ಕತ್, ಬಿಯರ್, ಐಸ್ ಕ್ರೀಂಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಈಗಾಗಲೇ ತಮಿಳುನಾಡು ಇದರ ನೇರ ಬಳಕೆಯನ್ನು ನಿಷೇಧಿಸಿದ್ದು, ಕರ್ನಾಟಕದಲ್ಲೂ ಬ್ಯಾನ್ ಮಾಡುವಂತೆ ಹಲವರು ಒತ್ತಾಯಿಸುತ್ತಿದ್ದಾರೆ.
ಲಿಕ್ವಿಡ್ ನೈಟ್ರೋಜನ್ ಜಗತ್ತಿನಲ್ಲಿಯೇ ಅತಿ ತಣ್ಣನೆಯ ವಸ್ತುವಾಗಿದ್ದು, ಅದನ್ನು ಸಾರಜನಕದ ದ್ರವೀಕರಣದಿಂದ ಮಾಡಲಾಗುತ್ತದೆ. ಅದರ ತಂಪಿನಲ್ಲಿ ಎಷ್ಟೊಂದು ತೀಕ್ಷ್ಣತೆ ಇರುತ್ತದೆ ಎಂದರೆ ಅಂಗೈ ಮೇಲೆ ಸುರಿದುಕೊಂಡರೆ ಅಂಗೈ ತೂತಾಗುತ್ತದೆ. ಬಿಯರ್‌ಗೆ ಇದನ್ನು ಸೇರಿಸಿದರೆ ಅದೊಂದು ಧೂಮದ ಮೋಡವನ್ನು ನಿರ್ಮಾಣ ಮಾಡುತ್ತದೆ. ಇದು ಅಸಾಧಾರಣವಾಗಿ ತಂಪಾಗಿರುತ್ತದೆ. ಇದರಿಂದ ಅಂಗಾಂಶಗಳನ್ನೂ ಫ್ರೀಜ್ ಮಾಡಬಹುದಾಗಿದ. ಇದು ಅಂಗಾಂಶಗಳಿಗೆ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸುವ ಮೂಲಕ ಉಸಿರುಕಟ್ಟುವಿಕೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
ದಾವಣಗೆರೆಯಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಬಾಲಕನೊಬ್ಬ ‘ಸ್ಮೋಕ್ ಬಿಸ್ಕೆಟ್’ ಸೇವಿಸಿದ ಬಳಿಕ ಅತೀವ್ರ ಹೊಟ್ಟೆನೋವು ಕಾಣಿಸಿಕೊಂಡು ತೊಂದರೆ ಅನುಭವಿಸಿದ್ದ. ಇದರ ವಿಡಿಯೋ ವೈರಲ್ ಆಗಿತ್ತು. ಘಟನೆ ಬಳಿಕ ಲಿಕ್ವಿಡ್ ನೈಟ್ರೋಜನ್ ಬಳಕೆ ನಿಷೇಧ ಕುರಿತು ಹಲವರು ದ್ವನಿಯೆತ್ತಿದ್ದರು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಇದರ ನೇರ ಬಳಕೆಯನ್ನು ನಿಷೇಧಿಸಿತ್ತು.
ಕರ್ನಾಟಕ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಪ್ರಕಾರ, ದುರ್ಬಳಕೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿದೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.