ಬೆಂಗಳೂರಿನಲ್ಲಿ 1200 ಚದರಡಿಯ ಕಟ್ಟಡಗಳಿಗೆ ಇನ್ನು ಒಸಿ ಅಗತ್ಯವಿಲ್ಲ

ಬೆಂಗಳೂರು:

    ಗ್ರೇಟರ್‌ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ 1200 ಚ.ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ದಿಷ್ಟ ಮಹಡಿವರೆಗಿನ ಮಿತಿಯಲ್ಲಿ ನಿರ್ಮಾಣಗೊಂಡಿರುವ ಹಾಗೂ ಹೊಸದಾಗಿ ನಿರ್ಮಿಸಲಿರುವ ವಾಸದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ  ಪಡೆಯುವುದರಿಂದ ವಿನಾಯಿತಿ  ನೀಡುವ ಮಹತ್ವದ ತೀರ್ಮಾನ ಕೈಗೊಂಡಿರುವ ರಾಜ್ಯ ಸರಕಾರ, ಈ ಸಂಬಂಧ ಮಂಗಳವಾರ ಆದೇಶ ಹೊರಡಿಸಿದೆ.

    ಅದರಂತೆ, 1200 ಚದರಡಿ ವಿಸ್ತೀರ್ಣದವರೆಗಿನ ನಿವೇಶನದಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಾಣಗೊಂಡಿರುವ ಮತ್ತು ನಿರ್ಮಿಸುವ ನೆಲಮಹಡಿ ಸಹಿತ ಎರಡು ಅಂತಸ್ತು ಅಥವಾ ತಳ ಮಹಡಿ (ಸ್ಟಿಲ್ಟ್‌) ಸಹಿತ ಮೂರು ಮಹಡಿ ವಾಸದ ಕಟ್ಟಡಕ್ಕೆ ಒಸಿ ಪಡೆಯುವುದರಿಂದ ವಿನಾಯಿತಿ ಸಿಗಲಿದೆ. ಜತೆಗೆ, ಕುಡಿಯುವ ನೀರು ಮತ್ತು ವಿದ್ಯುತ್‌ ಸಂಪರ್ಕ ಪಡೆಯುವಲ್ಲಿನ ಅಡಚಣೆ ನಿವಾರಣೆಗೆ ದಾರಿ ಸುಗಮವಾಗಲಿದೆ.

   ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ-2024ರ ಅಧ್ಯಾಯ 7ರ ನಿಬಂಧನೆಗಳ ಅನ್ವಯ ಕಟ್ಟಡ ಮತ್ತು ನಗರ ಯೋಜನಾ ನಿಯಮಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಕಾರ್ಯಗತಗೊಳಿಸಲು ಲಭ್ಯವಿರುವ ಕಾರ್ಯಪಡೆಯೊಂದಿಗೆ ದೃಢವಾದ ಆಡಳಿತ ರಚನೆಯನ್ನು ವಿನ್ಯಾಸಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ (ಜಿಬಿಎ, ಬೆಂನಪಾ-1) ಎನ್‌.ಕೆ. ಲಕ್ಷ್ಮೀಸಾಗರ್‌ ಅವರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ.ಸ್ವಾಧೀನಾನುಭವ ಪತ್ರ ವಿನಾಯಿತಿ ನೀಡಿರುವ ವಾಸದ ಕಟ್ಟಡಗಳ ನಿರ್ಮಾಣಕ್ಕೆ ಆರಂಭಿಕ ಪ್ರಮಾಣ ಪತ್ರ (ಸಿಸಿ) ಪಡೆಯುವ ಅಗತ್ಯವಿಲ್ಲ ಎಂದು ಮೂಲಗಳು ಹೇಳಿವೆ. ಹಾಗಾಗಿ, ನಿವೇಶನದಾರರಿಗೆ ಒಸಿ ಮತ್ತು ಸಿಸಿ ಎರಡರಿಂದಲೂ ವಿನಾಯಿತಿ ಸಿಕ್ಕಂತಾಗಲಿದೆ.

   ಗ್ರೇಟರ್‌ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ 1200 ಚ.ಅಡಿ ವಿಸ್ತೀರ್ಣ ಮೀರದಂತಹ ನಿವೇಶನಗಳಲ್ಲಿ ನಿರ್ಮಿಸುವ ಕಟ್ಟಡಗಳಿಗೆ ಪ್ರಾರಂಭಿಕ ಪ್ರಮಾಣಪತ್ರ (ಸಿಸಿ) ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯುವುದರಿಂದ ವಿನಾಯಿತಿ ನೀಡುವ ಸಂಬಂಧ ಬಿಬಿಎಂಪಿಯ ನಗರ ಯೋಜನೆ ವಿಭಾಗವು ಈ ಹಿಂದೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

   ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ 2024ರ ಸೆಕ್ಷನ್‌ 241(7)ರಲ್ಲಿ ಸ್ವಾಧೀನಾನುಭವ ಪ್ರಮಾಣಪತ್ರದಿಂದ ವಿನಾಯಿತಿ ನೀಡುವ ಅಧಿಕಾರವನ್ನು ಸರಕಾರಕ್ಕೆ ನೀಡಲಾಗಿದೆ. ಈ ಅವಕಾಶವು ಬಿಬಿಎಂಪಿ ಕಾಯಿದೆ-2020, ಕೆಎಂಸಿ ಕಾಯಿದೆ 1976 ಹಾಗೂ ಕರ್ನಾಟಕ ಪುರಸಭೆಗಳ ಕಾಯಿದೆ 1964ರಲ್ಲಿ ಇರಲಿಲ್ಲ. 2025ರ ಜುಲೈ 3ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ-2024ರ ಸೆಕ್ಷನ್‌ 241(7)ರಲ್ಲಿನ ಅವಕಾಶದಡಿ 1200 ಚ.ಅಡಿ ವಿಸ್ತೀರ್ಣ ಮೀರದಂತಹ ನಿವೇಶನಗಳಲ್ಲಿ ನೆಲ ಮತ್ತು 2 ಅಂತಸ್ತು ಅಥವಾ ಸ್ಟಿಲ್ಟ್‌ ಮತ್ತು 3 ಅಂತಸ್ತಿನವರೆಗಿನ ಕಟ್ಟಡಗಳಿಗೆ ಒಸಿಯಿಂದ ವಿನಾಯಿತಿ ನೀಡಲು ತೀರ್ಮಾನಿಸಲಾಗಿತ್ತು.

Recent Articles

spot_img

Related Stories

Share via
Copy link