ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ : 13 ಸಾವು

ಹಾವೇರಿ:

     ರಾಜ್ಯದಲ್ಲಿ ರಸ್ತೆ ಅಪಘಾತ ಪ್ರಕರಣ ಮುಂದುವರಿದಿದೆ. ಇಂದು ಶುಕ್ರವಾರ ನಸುಕಿನ ಜಾವ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 13 ಮಂದಿ ಮೃತಪಟ್ಟಿದ್ದಾರೆ.

    ನಿಂತಿದ್ದ ಟ್ರಕ್ ಗೆ ಹಿಂದಿನಿಂದ ಟಿಟಿ ವಾಹನ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಿಟಿ ವಾಹನದಲ್ಲಿದ್ದ 7 ಮಂದಿ ಮಹಿಳೆಯರು ಸೇರಿ 13 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಪರಶುರಾಮ್​​(45), ಭಾಗ್ಯ(40), ನಾಗೇಶ(50), ವಿಶಾಲಾಕ್ಷಿ(40), ಅರ್ಪಿತಾ(18), ಸುಭದ್ರಾ ಬಾಯಿ(65), ಪುಣ್ಯ(50), ಮಂಜುಳಾಬಾಯಿ, ಚಾಲಕ ಆದರ್ಶ್(23), ಮಾನಸ(24), ರೂಪಾ(40), ಮಂಜುಳಾ(50) ಎಂದು ಗುರುತಿಸಲಾಗಿದೆ.

     ಟೆಂಪೋ ಟ್ರಾವೆಲರ್‌ ಚಾಲಕ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ. ದಾರಿಹೋಕರು 112 ಗೆ ಕರೆ ಮಾಡಿದರು. ತಕ್ಷಣ ವೈದ್ಯಕೀಯ ತಂಡವು ಸ್ಥಳಕ್ಕೆ ತಲುಪಿತು. ಚಾಲಕ ನಿದ್ದೆ ಮಂಪರಿನಲ್ಲಿ ಅಜಾಗರೂಕತೆಯಿಂದ ಚಲಾಯಿಸಿ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.

    ಎಲ್ಲರೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್​ಎಹಟ್ಟಿ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನೆಯಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಅಪಘಾತ ನಡೆದಿದೆ ಎನ್ನಲಾಗಿದೆ.

   ಟಿಟಿ ವಾಹನದಲ್ಲಿದ್ದ ಒಟ್ಟು 15 ಜನರು ಸವದತ್ತಿ ರೇಣುಕಾ ಯಲ್ಲಮ್ಮ ದರ್ಶನ ಪಡೆದು ಮರಳಿ ಊರಿಗೆ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಂಬತ್ತು ಮಹಿಳೆಯರು, ಇಬ್ಬರು ಪುಟ್ಟ ಕಂದಮ್ಮಗಳು, ಇಬ್ಬರು ಗಂಡು ಮಕ್ಕಳು, ಚಾಲಕ ಒಳಗೊಂಡಿದ್ದಾರೆ. ಮೃತ ದೇಹಗಳನ್ನು ಹಾವೇರಿ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ವರ್ಗಾಯಿಸಲಾಗಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್​ ವರಿಷ್ಠಾದಿಕಾರಿ ಅಂಶಿಕುಮಾರ್ ತಿಳಿಸಿದ್ದಾರೆ. ನಿನ್ನೆ ತಡರಾತ್ರಿ ಬೆಳಗಾವಿಯ ಚಿಂಚಲಿಯಿಂದ ಹೊರಟು ಇಂದು ಬೆಳಗ್ಗೆ ಭದ್ರಾವತಿ ತಲುಪಬೇಕಿತ್ತು.

    ಹಾವೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ದುಃಖಕರ ವಿಷಯವೆಂದರೆ ಕುಟುಂಬವು ದುರಂತದಲ್ಲಿ ಅವಳಿ ಮಕ್ಕಳನ್ನು ಸಹ ಕಳೆದುಕೊಂಡಿದೆ.

   ಲಾರಿ ಚಾಲಕನ ತಪ್ಪು ಪಾರ್ಕಿಂಗ್ ಅಪಘಾತಕ್ಕೆ ಕಾರಣ ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಂಶುಕುಮಾರ್ ಹೇಳಿದ್ದಾರೆ. ಇಬ್ಬರು ಗಾಯಾಳುಗಳನ್ನು ಐಸಿಯುಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಲಾರಿಯ ಚಾಲಕ ಮತ್ತು ಅವರ ಸಹಾಯಕನನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ ಎಂದು ಹೇಳಿದ್ದಾರೆ.

     ಹಾವೇರಿ ಮತ್ತು ಮೋಟೆಬೆನ್ನೂರು ನಡುವಿನ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಲೇ ಇರುತ್ತದೆ. ಸುಮಾರು 20 ವರ್ಷ ಕಳೆದರೂ ಮೋಟೆಬೆನ್ನೂರಿನಲ್ಲಿ ಸಂಪರ್ಕ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಬೆಳಗ್ಗೆ ಸುದ್ದಿ ತಿಳಿದ ಸ್ಥಳೀಯರು ಅಪಘಾತ ಸ್ಥಳಕ್ಕೆ ದೌಡಾಯಿಸಿದರು. ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ಹೊರತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಬ್ಯಾಡಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಹೆಚ್ಚಿನ ವಿವರ ಕಲೆಹಾಕುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap