ಇಸ್ಲಮಾಬಾದ್:
ತಾಲಿಬಾನ್ ಉಗ್ರರು ನಡೆಸಿರುವ ಆತ್ಮಾಹುತಿ ದಾಳಿಯಲ್ಲಿ ಪಾಕಿಸ್ತಾನದ 13 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ನಾಗರಿಕರು, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 29 ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಉತ್ತರ ವಜೀರಿಸ್ತಾನ್ ಜಿಲ್ಲೆಯ ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ಮಾತನಾಡಿದ್ದು, ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಡಿಕ್ಕಿ ಹೊಡೆದಿದ್ದಾನೆ. ಈ ಸ್ಫೋಟದಲ್ಲಿ 13 ಸೈನಿಕರು ಸಾವನ್ನಪ್ಪಿದ್ದಾರೆ, 10 ಸೇನಾ ಸಿಬ್ಬಂದಿ ಮತ್ತು 19 ನಾಗರಿಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಸ್ಫೋಟದ ಪರಿಣಾಮವಾಗಿ ಎರಡು ಮನೆಗಳ ಛಾವಣಿಗಳು ಕುಸಿದು ಬಿದ್ದಿದ್ದು, ಮನೆಯೊಳಗಿದ್ದ ಆರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ನಾಲ್ವರು ಸೈನಿಕರು ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನ ತಾಲಿಬಾನ್‌ನ ಒಂದು ಬಣವಾದ ಹಫೀಜ್ ಗುಲ್ ಬಹದ್ದೂರ್ ಸಶಸ್ತ್ರ ಗುಂಪಿನ ಆತ್ಮಹತ್ಯಾ ಬಾಂಬರ್ ವಿಭಾಗವು ಈ ದಾಳಿಯ ಹೊಣೆ ಹೊತ್ತುಕೊಂಡಿದೆ.








