ಬೆಳಗಾವಿ:
ನಕಲಿ ಇನ್‌ವೈಸ್ (ದಾಖಲೆ) ಸೃಷ್ಟಿಸಿ 132 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಕೇಂದ್ರ ಜಿಎಸ್ಟಿ ಇಲಾಖೆಯ ಬೆಳಗಾವಿ ವಿಭಾಗದ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿಯನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಫೆಡರಲ್ ಲಾಜಿಸ್ಟಿಕ್ಸ್ ಮಾಲೀಕ ನಕೀಬ್ ನಜೀಬ್ ಮುಲ್ಲಾ ಬಂಧಿತ ಆರೋಪಿ. ರೂ.23.82 ಕೋಟಿಯ ನಕಲಿ ಇನ್‌ಪುಟ್ ಟ್ಯಾಕ್ಟ್ ಕ್ರೆಡಿಟ್ ಒಳಗೊಂಡ ರೂ.132 ಕೋಟಿ ಮೌಲ್ಯದ ನಕಲಿ ಜಿಎಸ್‌ಟಿ ಇನ್‌ವಾಯ್ಸ್ ರಾಕೆಟ್‌ಗಳನ್ನು ಸೃಷ್ಟಿಸಿದ್ದ. ಗ್ರಾಹಕರಿಂದ ಹಣ ಸಂಗ್ರಹಿಸಿ ಅದನ್ನು ಜಿಎಸ್‌ಟಿ ಕಚೇರಿಗೆ ಕಟ್ಟದೇ ವಂಚಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರಕು ಮತ್ತು ಸೇವೆಗಳ ನೈಜ ಪೂರೈಕೆ ಮಾಡದೇ ಆರೋಪಿಯು ನಕಲಿ ಇನ್‌ವಾಯ್ಸ್ ನೀಡುವ ಮೂಲಕ ಇನ್‌ಪುಟ್ ತೆರಿಗೆ ಕ್ರೆಡಿಟ್ ಪಡೆದಿದ್ದ. ‘ಫೆಡರಲ್ ಲಾಜಿಸ್ಟಿಕ್ಸ್ ಅಂಡ್ ಕಂ’ ಹೆಸರಿನ ಸಂಸ್ಥೆ ಕೂಡ ನಕಲಿಯಾಗಿದೆ. ಅದರ ಮೂಲಕವೇ ಅನೇಕ ಸಂಸ್ಥೆಗಳ ರಿಟರ್ನ್‌ಗಳು ಮತ್ತು ಇತರ ಜಿಎಸ್‌ಟಿ ಸಂಬಂಧಿತ ಸೇವೆ ನೀಡುವುದಾಗಿ ನಂಬಿಸಿದ್ದ. ಗ್ರಾಹಕರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.
ಸಿಜಿಎಸ್‌ಟಿ ಕಾಯ್ದೆ 2024ರ ಸೆಕ್ಷನ್ 69ರ ನಿಬಂಧನೆಗಳ ಪ್ರಕಾರ, ಸೆಕ್ಷನ್ 132(1) (ಬಿ) ಮತ್ತು 132 (1) (ಸಿ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಎಸ್‌ಟಿ ಮುಖ್ಯ ಆಯುಕ್ತ ದಿನೇಶ್ ಪಿ. ಪಂಗಾರ್ಕರ್ ತಿಳಿಸಿದ್ದಾರೆ.ಆರೋಪಿಯನ್ನು ಬೆಳಗಾವಿಯ ಜೆಎಂಎಫ್‌ಸಿ ಎರಡನೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.