ಶಿವಮೊಗ್ಗ:
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ನೆಚ್ಚಿನ ನಟನಿಗಾಗಿ ಕನವರಿಸುವ ಸಾಕಷ್ಟು ಜೀವಗಳಿವೆ. ದರ್ಶನ್ ಕೂಡ ಅಭಿಮಾನಿಗಳನ್ನು ಭೇಟಿ ಮಾಡಲು ಕಾಯುತ್ತಿರುತ್ತಾರೆ. ಪ್ರತಿ ದಿನ ರಾಜರಾಜೇಶ್ವರಿ ನಿವಾಸದ ಬಳಿ ನೂರಾರು ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ.
ಆದರೆ ಶಿವಮೊಗ್ಗ ಹೊಸಪೇಟೆಯ ರಿಪ್ಪನ್ ಪೇಟೆಯ ಅಭಿಮಾನಿಯೊಬ್ಬರು 14 ವರ್ಷಗಳಿಂದ ದರ್ಶನ್ ದರ್ಶನಕ್ಕೆ ಕಾದಿದ್ದರು.
ಆ ವೀರಾಭಿಮಾನಿಯ ಹೆಸರು ಸುದೀಪ್. 6ನೇ ತರಗತಿಯಲ್ಲಿ ಇದ್ದಾಗಲೇ ದರ್ಶನ್ ಸಿನಿಮಾಗಳನ್ನು ನೋಡಿ ಅಭಿಮಾನ ಬೆಳೆಸಿಕೊಂಡಿದ್ದ ಆತನಿಗೆ ಒಮ್ಮೆ ಆದರೂ ನೆಚ್ಚಿನ ನಟನನ್ನು ನೋಡಬೇಕು ಎನ್ನುವ ತವಕ ಇತ್ತು. ಇದಕ್ಕಾಗಿ ಸಾಕಷ್ಟು ಬಾರಿ ಪ್ರಯತ್ನ ನಡೆಸಿದರೂ ಫಲಿಸಿರಲಿಲ್ಲ. ಕೊನೆಗೂ ಆ ಘಳಿಗೆ ಬಂದಿದೆ. ಇತ್ತೀಚೆಗೆ ಮಡಿಕೇರಿ, ನಾಗರಹೊಳೆ, ಮೈಸೂರು ಪ್ರವಾಸ ಕೈಗೊಂಡಿದ್ದ ವೇಳೆ ನಟ ದರ್ಶನ್ ತಮ್ಮ ವೀರಾಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಅಭಿಮಾನಿ ಸುದೀಪ್ ಆರಾಧ್ಯ ದೈವನನ್ನು ನೋಡಿ ಖುಷಿಯಾಗಿದ್ದಾರೆ. ಸುದೀಪ್ ಮನೆಯವರಿಗೂ ಇದು ಸಮಾಧಾನ ತಂದಿದೆ.
ದರ್ಶನ್ ಸಿನಿಮಾಗಳು ಮಾತ್ರವಲ್ಲ. ಅವರ ಒಳ್ಳೆ ಗುಣ, ಪ್ರಾಣಿ- ಪಕ್ಷಿ ಪ್ರೀತಿ, ಸಹಾಯ ಮಾಡುವ ಗುಣವನ್ನು ಸಾಕಷ್ಟು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ದರ್ಶನ್ ಹುಟ್ಟುಹಬ್ಬ ಅಂದರೆ ತಮ್ಮದೇ ಹುಟ್ಟುಹಬ್ಬ ಎನ್ನುವಂತೆ ಸಂಭ್ರಮಿಸುತ್ತಾರೆ. ಚಾಲೆಂಜಿಂಗ್ ಸ್ಟಾರ್ ಸಿನಿಮಾ ರಿಲೀಸ್ ಆದರೆ ಥಿಯೇಟರ್‌ಗಳ ಮುಂದೆ ಜಮಾಯಿಸಿ ಬ್ಯಾನರ್ ಕಟ್ಟಿ, ಪಟಾಕಿ ಸಿಡಿಸಿ, ಜೈಕಾರ ಹಾಕಿ, ಕುಣಿಯುತ್ತಾರೆ.
ಅಭಿಮಾನಿ ಸುದೀಪ್ ಕಳೆದ 14 ವರ್ಷಗಳಿಂದ ಚಾಲೆಂಜಿಂಗ್ ಸ್ಟಾರ್‌ನ ನೋಡಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಚಿಕ್ಕಂದಿನಿಂದಲೇ ನೆಚ್ಚಿನ ನಟನನ್ನು ನೋಡಬೇಕು ಎಂದು ಕನವರಿಸಲು ಆರಂಭಿಸಿದ ಆತ ಇದಕ್ಕಾಗಿ ಸಾಕಷ್ಟು ಭಾರಿ ಪ್ರಯತ್ನ ಪಟ್ಟಿದ್ದಾನೆ. ಇದಕ್ಕಿಂದಂತೆ ದರ್ಶನ್‌ನ ನೋಡೊಕೆ ಹೋಗ್ತೀನಿ ಎಂದು ಹೇಳಿ ಬಟ್ಟೆ ತಗೊಂಡು ಮನೆ ಬಿಟ್ಟು ಹೊರಟುಬಿಡುತ್ತಿದ್ದನಂತೆ. ಬಸ್ಸು, ರೈಲು ಏರಿ ಬೆಂಗಳೂರಿಗೆ ಬರುತ್ತಿದ್ದಂತೆ. ದರ್ಶನ್ ಭೇಟಿ ಸಾಧ್ಯವಾಗದೇ ಕೆಲವೊಮ್ಮೆ ಬಿದ್ದು ಎದ್ದು ಮನೆಗೆ ವಾಪಸ್ ಆಗಿದ್ದು ಇದೆ. ಕುಟುಂಬಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ.
‘ಬುಲ್ ಬುಲ್’ ಸಿನಿಮಾ ಸಮಯದಲ್ಲಿ ಒಮ್ಮೆ ಶಿವಮೊಗ್ಗದ ಅಭಿಮಾನಿ ಸುದೀಪ್ ನೇರವಾಗಿ ರಾಜರಾಜೇಶ್ವರಿ ನಗರದ ದರ್ಶನ್ ಮನೆಗೆ ಬಂದಿದ್ದರಂತೆ. ಆದರೆ ದರ್ಶನ್ ಮನೆಯಲ್ಲಿ ಇರಲಿಲ್ಲ. ಅವರು ವಿದೇಶಕ್ಕೆ ಹೋಗಿದ್ದಾರೆ ಎಂದು ಕೇಳಿ ಮನೆ ಬಾಗಿಲು ಮುಚ್ಚಿದ್ದರಂತೆ. ಆ ಘಟನೆಯನ್ನು ಸುದೀಪ್ ಇನ್ನು ನೆನಪಿಟ್ಟುಕೊಂಡಿದ್ದಾನೆ. ಇತ್ತೀಚೆಗೆ ಪೋಸ್ಟ್‌ಮ್ಯಾನ್ ನ್ಯೂಸ್ ಕನ್ನಡ ಯೂಟ್ಯೂಬ್ ಚಾನಲ್ ಮೂಲಕ ಅಭಿಮಾನಿ ಸುದೀಪ್ ಹಾಗೂ ಆತನ ತಾಯಿ ತಾರಾ ಅವರು ತಮ್ಮ ಮನವಿಯನ್ನು ಇಟ್ಟಿದ್ದರು. ಕೊನೆಗೂ ಇದೀಗ ದರ್ಶನ್ ಆತನನ್ನು ಭೇಟಿ ಮಾಡಿದ್ದಾರೆ.
ಆಷಾಢ ಶುಕ್ರವಾರ ನಟ ದರ್ಶನ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೋಡಿ ತಾಯಿಯ ದರ್ಶನ ಪಡೆದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ವೈರಲ್ ಆಗುತ್ತಿದೆ. 2 ದಿನ ಮೊದಲೇ ಸ್ನೇಹಿತರೊಟ್ಟಿಗೆ ಮಡಿಕೇರಿ, ನಾಗರಹೊಳೆ ಪ್ರವಾಸ ಕೈಗೊಂಡಿದ್ದ ದರ್ಶನ್ ನಿನ್ನೆ(ಜೂನ್ 23) ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.
ಸದ್ಯ ದರ್ಶನ್ ‘ಕಾಟೇರ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಬಿ. ಸಿ ಪಾಟೀಲ್ ನಿರ್ಮಾಣದ ‘ಗರಡಿ’ ಚಿತ್ರದ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಿದೆ. ‘ಕಾಟೇರ’ ವರ್ಷಾಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರದಲ್ಲಿ ಕುಸ್ತಿ ಪೈಲ್ವಾನ್ ಆಗಿ ದರ್ಶನ್ ಅಬ್ಬರಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ