ಬೆಂಗಳೂರು:
ನಟಿ ರನ್ಯಾ ರಾವ್ ಭಾಗಿಯಾಗಿದ್ದಾರೆ ಎನ್ನಲಾದ ಚಿನ್ನ ಕಳ್ಳಸಾಗಣೆ ಪ್ರಕರಣದ ಎರಡನೇ ಆರೋಪಿಯಾಗಿರುವ ತರುಣ್ ರಾಜು ಅವರನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಶುಕ್ರವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ತರುಣ್ ರಾಜು ಅವರ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಕಸ್ಟಡಿ ಅಂತ್ಯಗೊಂಡ ನಂತರ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್ ಈ ಆದೇಶ ಹೊರಡಿಸಿದ್ದಾರೆ. ಎರಡನೇ ಆರೋಪಿಯನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು ಎಂದು ಡಿಆರ್‌ಐ ನ್ಯಾಯಾಲಯಕ್ಕೆ ತಿಳಿಸಿದೆ.
ಗುರುವಾರ, ಜಾರಿ ನಿರ್ದೇಶನಾಲಯ (E.D) ಬೆಂಗಳೂರಿನ ಕುಮಾರ ಪಾರ್ಕ್ ಪೂರ್ವ ರಸ್ತೆಯಲ್ಲಿರುವ ರನ್ಯಾ ರಾವ್ ಅವರ ಆಪ್ತ ಸ್ನೇಹಿತ ಮತ್ತು ಸ್ಟಾರ್ ಹೋಟೆಲ್ ಮಾಲೀಕರ ಮೊಮ್ಮಗನಾದ ತರುಣ್ ರಾಜು ಅವರ ನಿವಾಸದ ಮೇಲೆ ದಾಳಿ ನಡೆಸಿತು.
ಚಿನ್ನ ಕಳ್ಳಸಾಗಣೆ ಪ್ರಕರಣದ ಮೊದಲ ಆರೋಪಿಯಾಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯ ಬಗ್ಗೆಯೂ ನ್ಯಾಯಾಲಯ ಶುಕ್ರವಾರ ತೀರ್ಪು ನೀಡುವ ನಿರೀಕ್ಷೆಯಿದೆ. ಸದ್ಯ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ. ರನ್ಯಾ ರಾವ್‌ಗೆ ಜಾಮೀನು ದೊರೆತರೂ, ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಡಿಆರ್‌ಐ ಜೊತೆಗೆ ತನಿಖೆ ನಡೆಸುತ್ತಿರುವ ಇ.ಡಿ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಹೆಚ್ಚಿನ ತನಿಖೆಗಾಗಿ ಅವರನ್ನು ಕಸ್ಟಡಿಗೆ ಕೋರುವ ಸಾಧ್ಯತೆಯಿದೆ ಎಂದು ಮೂಲಗಳು ಸೂಚಿಸಿವೆ.
ಈ ಪ್ರಕರಣದಲ್ಲಿ ಇ.ಡಿ ಇಸಿಐಆರ್ (ಎನ್‌ಫೋರ್ಸ್‌ಮೆಂಟ್ ಕೇಸ್ ಇನ್ಫರ್ಮೇಶನ್ ರಿಪೋರ್ಟ್) ದಾಖಲಿಸಿದ್ದು, ಚಿನ್ನ ಕಳ್ಳಸಾಗಣೆ ಮತ್ತು ಹವಾಲಾ ವಹಿವಾಟಿನ ಚಲನವಲನಗಳನ್ನು ಪತ್ತೆಹಚ್ಚುತ್ತಿದೆ. ಮತ್ತೊಂದೆಡೆ, ಸಿಬಿಐ ಅಂತರರಾಷ್ಟ್ರೀಯ ಸಂಪರ್ಕಗಳು ಮತ್ತು ಅಧಿಕಾರಿಗಳ ಒಳಗೊಳ್ಳುವಿಕೆ ಕುರಿತು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ರನ್ಯಾ ರಾವ್ ಮತ್ತು ಇತರರು ಭಾಗಿಯಾಗಿರುವ ಅಂಶದ ಬಗ್ಗೆ ಡಿಆರ್‌ಐ ತನಿಖೆ ನಡೆಸುತ್ತಿದೆ.
ಈಮಧ್ಯೆ, ಪೊಲೀಸರ ಒಪ್ಪಂದ ಮತ್ತು ಲೋಪಗಳ ತನಿಖೆಗಾಗಿ ರಾಜ್ಯ ಸರ್ಕಾರದಿಂದ ನಿಯೋಜಿಸಲ್ಪಟ್ಟ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಶುಕ್ರವಾರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ರನ್ಯಾ ರಾವ್ ಬಂಧನಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಅಧಿಕಾರಿಗಳ ಬಗ್ಗೆ ಮತ್ತು ಅವರ ಹಿಂದಿನ ಭೇಟಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೇಟಿಯ ಸಮಯದಲ್ಲಿ ಸ್ಥಳೀಯ ಡಿಸಿಪಿ ಕೂಡ ಹಾಜರಿದ್ದರು.
