ನವದೆಹಲಿ:
ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತುಗೊಂಡ ಸಂಸದರಿಗೆ ಲೋಕಸಭೆ ಸಚಿವಾಲಯ ನೋಟಿಸ್ ಜಾರಿ ಮಾಡಿದೆ. ಲೋಕಸಭೆಯಿಂದ ಮತ್ತು ರಾಜ್ಯಸಭೆಯಿಂದ ಅಮಾನತುಗೊಂಡ ಒಟ್ಟು 141 ಸಂಸದರು ಸಂಸತ್ತಿನ ಚೇಂಬರ್, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸದಂತೆ ಸುತ್ತೋಲೆಯಲ್ಲಿ ತಿಳಿಸಿದೆ.
ಸಂಸತ್ ಭವನದಲ್ಲಿ ಡಿಸೆಂಬರ್ 13ರಂದು ಉಂಟಾದ ಭದ್ರತಾ ಲೋಪ ಕುರಿತು ಚರ್ಚೆಗೆ ಒತ್ತಾಯಿಸಿ ಉಭಯ ಸದನಗಳಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕೆ ವಿವಿಧ ಪಕ್ಷಗಳ ಸದಸ್ಯರನ್ನು ಲೋಕಸಭೆ ಹಾಗೂ ರಾಜ್ಯಸಭೆ ಸೇರಿ ಉಭಯ ಸದನಗಳಿಂದ ಅಮಾನತುಗೊಳಿಸಲಾಗಿತ್ತು. ಇದರ ಬೆನ್ನಲೆ ಲೋಕಸಭೆ ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ಅಮಾನತುಗೊಂಡ ಎಲ್ಲ ಸಂಸದರು ಈ ಅವಧಿಯಲ್ಲಿ ಸಂಸತ್ತಿ ಮೊಗಸಾಲೆ, ಗ್ಯಾಲರಿ ಮತ್ತು ಕೋಣೆಗಳಿಗೆ ಪ್ರವೇಶಿಸಲು ನಿಷೇಧವಿದೆ ಎಂದು ತಿಳಿಸಿದೆ.
ಅಲ್ಲದೇ, ಯಾವುದೇ ಸಂಸದೀಯ ಸಮಿತಿಯ ಸಭೆಗೆ ಹಾಜರಾಗಲು ಅವರಿಗೆ ಅವಕಾಶವಿರಲ್ಲ. ಅಮಾನತು ಅವಧಿಯಲ್ಲಿ ಅವರು ಯಾವುದೇ ಸೂಚನೆ ನೀಡುವಂತಿಲ್ಲ. ತಮ್ಮ ಅಮಾನತು ಅವಧಿಯಲ್ಲಿ ನಡೆದ ಸಮಿತಿಗಳಿಗೆ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ. ಅಧಿವೇಶನದ ಉಳಿದ ಅವಧಿಗೆ ಅವರನ್ನು ಸದನದ ಸೇವೆಯಿಂದ ಅಮಾನತುಗೊಳಿಸಿದರೆ, ಅವರು ಅಮಾನತು ಅವಧಿಯಲ್ಲಿ ದೈನಂದಿನ ವೇತನದ ಭತ್ಯೆಗೆ ಅರ್ಹರಾಗಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಾಸ್ತವವಾಗಿ ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಸದಸನದಲ್ಲಿ ಪ್ರತಿಭಟನೆ ನಡೆಸಿದ್ದವು.ಸದನದಲ್ಲಿ ಗದ್ದಲದ ನಂತರ ಲೋಕಸಭೆಯ 95 ಮತ್ತು ರಾಜ್ಯಸಭೆಯ 46 ಒಟ್ಟು 141 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಇದನ್ನೂ ವಿರೋಧಿಸಿ ಡಿಸೆಂಬರ್ 22 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಸಂಸದರ ಅಮಾನತುಗೊಳಿಸಿರುವುದು ಪ್ರಜಾಸತ್ತಾತ್ಮಕ ನಡೆಯಲ್ಲ. ಪ್ರಧಾನಿ ಅವರು ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಕಟ್ಟಡಗಳ ಉದ್ಘಾಟಿಸುತ್ತಾರೆ. ತಮ್ಮ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಆದರೆ, ಉಭಯ ಸದನಗಳ ಒಳಗೆ ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಹೇಳಿಕೆ ನೀಡುವುದಿಲ್ಲ.
ಪ್ರತಿಪಕ್ಷಗಳು ಬೇಡಿಕೆ ಮುಂದಿಟ್ಟಾಗ ಅವರನ್ನು ಅಮಾನತು ಮಾಡಲಾಗುತ್ತದೆ. ಇದರ ವಿರುದ್ಧ ಒಟ್ಟಾಗಿ ಹೋರಾಡುತ್ತೇವೆ. ಪ್ರಧಾನಿ ಮತ್ತು ಗೃಹ ಸಚಿವರು ತಾವು ಮಾತ್ರ ಆಡಳಿತಕ್ಕೆ ಅರ್ಹರು ಎಂದು ಭಾವಿಸುತ್ತಾರೆ. ಅವರದ್ದು ತಪ್ಪು ಎಂಬುದನ್ನು ತೋರಿಸುತ್ತೇವೆ” ಎಂದು ತಿಳಿಸಿದ್ದಾರೆ.