ದುರ್ಗ್:
ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಬಸ್ಸೊಂದು ‘ಮುರುಮ್’ ಮಣ್ಣಿನ ಗಣಿಗಾರಿಕೆ ಗುಂಡಿಗೆ ಬಿದ್ದಿದ್ದರಿಂದ ಕನಿಷ್ಠ 15 ಜನರು ಸಾವಿಗೀಡಾಗಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲರೂ ಖಾಸಗಿ ಸಂಸ್ಥೆಯ ಉದ್ಯೋಗಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತರು ಡಿಸ್ಟಿಲರಿಯಿಂದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಕುಮ್ಹಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಪ್ರಿ ಗ್ರಾಮದ ಬಳಿ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ದುರ್ಗ್ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, 30 ಕ್ಕೂ ಹೆಚ್ಚು ಜನರಿದ್ದ ಬಸ್ ರಸ್ತೆಯಿಂದ ಸ್ಕಿಡ್ ಆಗಿ 40 ಅಡಿ ಆಳದ ‘ಮುರುಮ್’ ಗಣಿಯಲ್ಲಿ ಬಿದ್ದಿದೆ. ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ 15 ಜನರು ಸಾವಿಗೀಡಾಗಿದ್ದಾರೆ ಎಂದು ಅವರು ಹೇಳಿದರು.ಮುರುಮ್ ಎನ್ನುವುದು ಒಂದು ರೀತಿಯ ಮಣ್ಣಾಗಿದ್ದು, ಇದನ್ನು ಹೆಚ್ಚಾಗಿ ನಿರ್ಮಾಣ ಕಾರ್ಯಗಳಿಗಾಗಿ ಬಳಸಲಾಗುತ್ತದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಶುಕ್ಲಾ ಹೇಳಿದರು.ಘಟನೆ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ದುರ್ಗ್ ಜಿಲ್ಲಾಧಿಕಾರಿ ರಿಚಾ ಪ್ರಕಾಶ್ ಚೌಧರಿ ಸುದ್ದಿಗಾರರಿಗೆ ತಿಳಿಸಿದರು.
‘ಬಸ್ ಕುಮ್ಹಾರಿ ಪ್ರದೇಶದಲ್ಲಿ ನೆಲೆಗೊಂಡಿರುವ ಕೆಡಿಯಾ ಡಿಸ್ಟಿಲರೀಸ್‌ನ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. ಇದುವರೆಗೆ 15 ಜನರ ಸಾವಿಗೀಡಾಗಿರುವುದು ದೃಢಪಟ್ಟಿದೆ. ಗಾಯಗೊಂಡ 14 ಮಂದಿಯಲ್ಲಿ 12 ಮಂದಿಯನ್ನು ರಾಯ್‌ಪುರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ಕೊಂಡೊಯ್ಯಲಾಗಿದ್ದು, ಇನ್ನಿಬ್ಬರು ಇಲ್ಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಅವರು ಹೇಳಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ‘ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಬಸ್ ಅಪಘಾತದಲ್ಲಿ ಹಲವಾರು ಜನರ ಸಾವಿನ ಸುದ್ದಿಯಿಂದ ನಾನು ತುಂಬಾ ದುಃಖಿತಳಾಗಿದ್ದೇನೆ. ಎಲ್ಲಾ ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಬಯಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
‘ಬಸ್ ಅಪಘಾತದಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಗಳ ಸಾವಿನ ಸುದ್ದಿ ತಿಳಿದು ಆಘಾತವಾಗಿದೆ. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಸಂತ್ರಸ್ತರ ಕುಟುಂಬ ಸದಸ್ಯರಿಗೆ ದೇವರು ಶಕ್ತಿ ನೀಡಲಿ. ಗಾಯಾಳುಗಳ ಚಿಕಿತ್ಸೆಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ’ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ತಿಳಿಸಿದ್ದಾರೆ.