1.25 ಕೋಟಿ ರೂ.ಗಳ ವೆಚ್ಚದಲ್ಲಿ ಬಾಲಕಿಯರ ಪದವಿಪೂರ್ವ ಕಾಲೇಜು ವಿಸ್ತರಣೆ
ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ : ಶಾಸಕ ಶರತ್ ಬಚ್ಚೇಗೌಡ ಅಭಿಮತ
ಹೊಸಕೋಟೆ
ಗ್ರಾಮೀಣ ಪ್ರದೇಶದ ಬಾಲಕಿಯರು ಶೈಕ್ಷಣಿಕ ಪ್ರಗತಿ ಸಾಧಿಸಲು ಅನುವಾಗುವಂತೆ 1.25 ಕೋಟಿ ರೂ.ಗಳ ವೆಚ್ಚದಲ್ಲಿ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಅವರು ನಗರದ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಲಭ್ಯವಿರುವ ಸೌಲಭ್ಯಗಳನ್ನು ಪರಿಶೀಲಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಎಸ್‌ಎಸ್‌ಎಲ್‌ಸಿ ನಂತರ ಶಿಕ್ಷಣ ಮುಂದುವರೆಸಲು ಹೆಚ್ಚಿನ ಬಾಲಕಿಯರ ಆಸಕ್ತಿ ತೋರುತ್ತಿರುವ ಕಾರಣ ದಾಖಲಾತಿ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಇದರೊಂದಿಗೆ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉಪನ್ಯಾಸಕರ ಗುಣಮಟ್ಟದ ಬೋಧನೆ, ಬಾಲಕಿಯರ ಕಲಿಕಾ ಸಾಮರ್ಥ್ಯದಿಂದಾಗಿ ಉತ್ತಮ ಫಲಿತಾಂಶ ಸಹ ಪಡೆದುಕೊಳ್ಳುತ್ತಿದ್ದು ಗ್ರಾಮಾಂತರ ಜಿಲ್ಲೆಗೆ ಮಾದರಿಯಾಗಿದೆ. ಕಾಲೇಜಿನಲ್ಲಿ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿದ್ದು ಪೂರಕವಾದ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿ ಬಾಲಕಿಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಂದಾಜು 1.25 ಕೋಟಿ ರೂ.ಗಳ ವೆಚ್ಚದಲ್ಲಿ ಅಗತ್ಯವಾದ ಕೊಠಡಿಗಳೊಂದಿಗೆ ವಿಜ್ಞಾನ ವಿಭಾಗಕ್ಕೆ ಪ್ರತ್ಯೇಕವಾದ ಪ್ರಯೋಗಾಲಯ ನಿರ್ಮಾಣ ಮಾಡಲು, ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಕಾಲೇಜಿನಲ್ಲಿ ಪ್ರಸ್ತುತ 1100ಕ್ಕೂ ಹೆಚ್ಚಿನ ಬಾಲಕಿಯರು ವಿದ್ಯಾಭ್ಯಾಸ ಮಾಡುತ್ತಿದ್ದು ಸ್ಥಳವಕಾಶದ ಕೊರತೆ ನೀಗಿಸಲು ಸಹಕಾರಿಯಾಗಲಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಈಗಾಗಲೇ 1.25 ಕೋಟಿ ರೂ.ಗಳು ಮಂಜೂರಾಗಿದ್ದು ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ನಿರ್ಮಾಣವನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಭವಿಷ್ಯದಲ್ಲಿ ಕಾಲೇಜಿಗೆ ಖಾಸಗಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಅಗತ್ಯ ವ್ಯವಸ್ಥೆ ಕಲ್ಪಿಸಿ ಕಲಿಕಾ ಪ್ರಗತಿ ಹೊಂದಲು ಉತ್ತೇಜಿಸಲಾಗುವುದು ಎಂದರು.
ನಗರಸಭೆ ಸದಸ್ಯರಾದ ಕೇಶವಮೂರ್ತಿ, ಗೌತಮ್, ಉದ್ಯಮಿ ಬಿ.ವಿ.ಬೈರೇಗೌಡ, ಮುಖಂಡರಾದ ರಾಕೇಶ್, ಮುನಿರಾಜು, ಹರೀಶ್, ಮಂಜುನಾಥ್, ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಚಂದ್ರ ಮರಕಾಲ್, ಹಿರಿಯ ಉಪನ್ಯಾಸಕ ಉಮಾಮಹೇಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ವಿವೇಕಾನಂದ ಇನ್ನಿತರರು ಹಾಜರಿದ್ದರು.