ಇಸ್ಲಾಮಾಬಾದ್:
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಮಂಗಳವಾರ 450ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲನ್ನು (Train Hijack) ಅಪಹರಿಸಿರುವ ಪ್ರತ್ಯೇಕತಾವಾದಿ ಉಗ್ರರು, 182 ಮಂದಿ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಬಲೂಚ್ ಲಿಬರೇಶನ್ ಆರ್ಮಿ ಉಗ್ರರು ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮಂಗಳವಾರ ಗುಂಡಿನ ದಾಳಿ ನಡೆಸಿದ್ದಾರೆ. ಒತ್ತೆಯಾಳುಗಳನ್ನು ರಕ್ಷಿಸುವಲ್ಲಿ ಪಾಕ್ ಭದ್ರತಾ ಪಡೆಗಳ ಕಾರ್ಯಾಚರಣೆ ಮುಂದುವರಿದಿದೆ. ಸದ್ಯ 104 ಒತ್ತೆಯಾಳುಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಗುಂಡಿನ ಚಕಮಕಿಯಲ್ಲಿ 16 ಬಂಡುಕೋರರು ಹತರಾಗಿದ್ದಾರೆ ಎಂದು ಪಾಕ್ ಸೇನೆ ತಿಳಿಸಿದೆ.
ಪಾಕಿಸ್ತಾನ ವಿರೋಧಿ ಧೋರಣೆ ಹೊಂದಿರುವ ಬಲೂಚಿಸ್ತಾನದ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಉಗ್ರರು ಖೈಬರ್ ಕಣಿವೆಯ ಗುಡಾಲಾರ್ ಹಾಗೂ ಪಿರು ಕೊಣೇರಿ ನಡುವಿನ 8ನೇ ಸುರಂಗದ ಸನಿಹ ಸಾಗುತ್ತಿದ್ದ 9 ಕೋಚ್‌ಗಳಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ರೈಲು ಚಾಲಕ ಹಾಗೂ ಕೆಲವರು ಗಾಯಗೊಂಡಿದ್ದಾರೆ. ಬಳಿಕ ರೈಲನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಎಲ್ಲಾ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದೀಗ 58 ಪುರುಷರು, 31 ಮಹಿಳೆಯರು ಮತ್ತು 15 ಮಕ್ಕಳು ಸೇರಿದಂತೆ 104 ಒತ್ತೆಯಾಳುಗಳನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಮತ್ತೊಂದೆಡೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ 6 ಪಾಕ್ ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪೇಶಾವರಕ್ಕೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಅಪಹರಿಸಿ ದಾಳಿ ಮಾಡಿದ ನಂತರ 30 ಕ್ಕೂ ಹೆಚ್ಚು ಪಾಕಿಸ್ತಾನಿ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವುದಾಗಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೇಳಿಕೊಂಡಿದೆ.
ಪಾಕಿಸ್ತಾನ ಸೇನಾ ಪಡೆ ಪ್ರತಿ ಕಾರ್ಯಾಚರಣೆ ಕೈಗೊಂಡಲ್ಲಿ ಪರಿಣಾಮಗಳು ತೀವ್ರವಾಗಿರಲಿವೆ. ನಮ್ಮ ವಿರುದ್ಧ ಸೇನೆ ದಂಡೆತ್ತಿ ಬಂದರೆ ಎಲ್ಲಾಒತ್ತೆಯಾಳುಗಳನ್ನು ಕೊಲ್ಲುತ್ತೇವೆ. ಮುಂದಾಗುವ ರಕ್ತಪಾತದ ಹೊಣೆಯನ್ನು ಸೇನೆಯೇ ಹೊರಬೇಕಾಗುತ್ತದೆ,’ ಎಂದು ಬಿಎಲ್‌ಎ ಎಚ್ಚರಿಕೆ ನೀಡಿದೆ.
