ಬೆಳಗಾವಿ
ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಬೆಳಗಾವಿಯ ಜಿಲ್ಲೆಯಲ್ಲಿ ಹರಿಯುವ ಪಂಚನದಿಗಳಾದ ಕೃಷ್ಣಾ , ಘಟಪ್ರಭಾ, ಮಲಪ್ರಭಾ, ವೇದಗಂಗಾ, ಮತ್ತು ದೂಧಗಂಗಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಚಿಕ್ಕೋಡಿ ತಾಲೂಕಿನಲ್ಲಿನ 8 ಕೆಳ ಹಂತದ ಸೇತುವೆಗಳು ಒಂದೇ ರಾತ್ರಿ ಜಲಾವೃತಗೊಂಡಿವೆ. ಇದರಿಂದ ತಾಲೂಕಿನಲ್ಲಿ 18 ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜನರು ಪರ್ಯಾಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದಾರೆ.
ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ, ಬಾರವಾಡ-ಕುನ್ನೂರ ಸೇತುವೆ ಜಲಾವೃತಗೊಂಡಿದೆ. ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್, ಬೋಜವಾಡಿ-ಕುನ್ನೂರ, ಮಲ್ಲಿಕವಾಡ-ದತ್ತವಾಡ ಸೇತುವೆ ಜಲಾವೃತಗೊಂಡಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಕ್ಸಂಬಾ-ದತ್ತವಾಡ, ಕಲ್ಲೋಳ-ಯಡೂರ ಮತ್ತು ಬಾವನಸೌದತ್ತಿ-ಮಾಂಜರಿ ಸೇತುವೆ ಮುಳುಗಡೆಯಾಗಿದೆ.
ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಗೆ ಅಡ್ಡಲಾಗಿ ಕಟ್ಟಿರುವ ಮಲಿಕವಾಡ-ದತ್ತವಾಡ ಸೇತುವೆ ಎರಡೇ ತಿಂಗಳಲ್ಲಿ ಆರನೇ ಬಾರಿಗೆ ಮುಳುಗಡೆಯಾಗಿದೆ. ತುಂಬಿ ಹರಿಯುತ್ತಿರುವ ದೂದಗಂಗಾ ನದಿಗೆ ಮಹಿಳೆಯರು ಪೂಜೆ ಸಲ್ಲಿಸಿ, ರೈತರಿಗೆ, ಜನರಿಗೆ ಒಳ್ಳೆಯದನ್ನು ಮಾಡುಅಂತ ಬೇಡಿಕೊಂಡರು.
ಮತ್ತೊಂದಡೆ, ಚಿಕ್ಕೋಡಿ ತಾಲೂಕಿನ ಮುಲ್ಲಾನಕಿ ಗ್ರಾಮದಲ್ಲಿರುವ ಹಜರತ್ ಮನ್ಸೂರ್ ಅಲಿ ದರ್ಗಾ ದೂದಗಂಗಾ ನದಿಯಲ್ಲಿ ಮುಳುಗಡೆಯಾಗಿದೆ. ಏಕಾಏಕಿ ನೀರು ಏರಿಕೆಯಾಗಿದ್ದರಿಂದ ನದಿ ಪಕ್ಕದ ಪಂಪ್ ಸೆಟ್, ಮೋಟರ್ಗಳು ಕೊಚ್ಚಿಕೊಂಡು ಹೋಗುತ್ತಿವೆ. ದೂದಗಂಗಾ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.
ಇನ್ನು, ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ಸವದತ್ತಿ ಹೊರ ವಲಯದಲ್ಲಿರುವ ನವಿಲುತೀರ್ಥ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇದರಿಂದ 10ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಮಲಪ್ರಭಾ ಡ್ಯಾಂ ನಲ್ಲಿ 2078.75ನೀರು ಸಂಗ್ರಹವಾಗಿದೆ. ಜಲಾಶಯ 2079.50 ಸಾಮರ್ಥ್ಯ ಹೊಂದಿದೆ. ಮಲಪ್ರಭಾ ನದಿ ಪಾತ್ರದ ಜನರು ಜಾನುವಾರಗಳ ಸಮೇತ ಸುರಕ್ಷಿತ ಸ್ಥಳದಲ್ಲಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.








