ಬೆಂಗಳೂರು:
ಊಟ ಮಾಡುವಾಗ ಇಲಿ ಪಾಷಾಣ ಸ್ಪ್ರೇ ಮಾಡಿದ್ದರ ಪರಿಣಾಮ ಬೆಂಗಳೂರಿನ ಆದರ್ಶ ನರ್ಸಿಂಗ್ ಕಾಲೇಜಿನ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಜ್ಞಾನಭಾರತಿಯ ಅಮ್ಮ ಆಶ್ರಮದ ಮುಂಭಾಗದ ಪಿಜಿಯಲ್ಲಿ ಘಟನೆ ನಡೆದಿದೆ. ರಾತ್ರಿ 8 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾಗ ಊಟದ ಹಾಲ್‌ನಲ್ಲೇ ಇಲಿ ಪಾಯಿಸನ್ ಸ್ಪ್ರೇ ಮಾಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳಲ್ಲಿ ವಾಂತಿ ಕಾಣಿಸಿಕೊಂಡಿತ್ತು. ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬಾತ ಸ್ಪ್ರೇ ಮಾಡಿದ್ದು, ಇದರಿಂದ ಫುಡ್ ಪಾಯಿಸನ್ ಆಗಿದೆ.
ತಕ್ಷಣವೇ ಎಚ್ಚೆತ್ತ ಹಾಸ್ಟೆಲ್ ಸಿಬ್ಬಂದಿ ಹತ್ತಿರದ ಆಸ್ಪತ್ರೆಗಳಿಗೆ ವಿದ್ಯಾರ್ಥಿಗಳ ರವಾನೆ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಪೈಕಿ ಮೂವರು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ಜ್ಞಾನಭಾರತಿ ಠಾಣಾ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
19 ವಿದ್ಯಾರ್ಥಿಗಳ ಪೈಕಿ ಜಯಂತ್ ವರ್ಗೀಸ್, ದಿಲಿಶ್ ಮತ್ತು ಜೋಮೊನ್ ಅವರ ಸ್ಥಿತಿ ಚಿಂತಾಜನಕವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತರ ವಿದ್ಯಾರ್ಥಿಗಳ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಆಸ್ಪತ್ರೆಗೆ ದಾಖಲಾದ ನೋಯಲ್ ಎಂಬ ವಿದ್ಯಾರ್ಥಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಹಾಸ್ಟೆಲ್ ಆಡಳಿತ ಮಂಡಳಿ, ಹಾಸ್ಟೆಲ್ ವಾರ್ಡನ್ ಮತ್ತು ಮಂಜೇಗೌಡ ವಿರುದ್ಧ ವಿಷಕಾರಿ ಪದಾರ್ಥಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಬಿಎನ್‌ಎಸ್‌ನ ಸೆಕ್ಷನ್ 286 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.