ಹಾವೇರಿ:
ಹಾವೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದಕ್ಕೆ ಸಂಬಂಧಿಸಿ ಕೊನೆಗೂ ಪೊಲೀಸರು 19 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಹಾವೇರಿ ಗ್ಯಾಂಗ್ ರೇಪ್ ಪ್ರಕರಣ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದ್ದು ಅಲ್ಲದೆ ರಾಜಕೀಯವಾಗಿಯೂ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಗ್ಯಾಂಗ್ರೇಪ್ ಘಟನೆ ನಡೆದು 58 ದಿನಗಳ ಬಳಿಕ ಪೊಲೀಸರು ಹಾನಗಲ್ ಜೆಎಂಎಫ್ ಕೋರ್ಟ್ಗೆ 873 ಪುಟಗಳ ಚಾರ್ಜ್ಶೀಟ್ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಕಳೆದ ಜನವರಿ 8ರಂದು ಹಾನಗಲ್ ಬಳಿ ಶಿರಸಿ ಮೂಲದ ಮುಸ್ಲಿಂ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪ್ರಕರಣ ಸಂಬಂಧ 19 ಆರೋಪಿಗಳನ್ನು ಹಾನಗಲ್ ಪೊಲೀಸರು ಬಂಧಿಸಿದ್ದರು. ಅತ್ಯಾಚಾರ ಎಸಗಿದ 7 ಪ್ರಮುಖ ಆರೋಪಿಗಳು ಸೇರಿ ಒಟ್ಟು 19 ಮಂದಿಯ ಹೆಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ವಿಚಾರಣೆ ವೇಳೆ 7 ಪ್ರಮುಖ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದರು.
ಹಾನಗಲ್ ಪೊಲೀಸರು ಘಟನೆ ಸಂಬಂಧ 20 ದಿನಗಳ ಹಿಂದೆಯೇ ತನಿಖೆಯನ್ನು ಪೂರ್ಣಗೊಳಿಸಿದ್ದರು. ಆದರೆ ಎಫ್ಎಸ್ಎಲ್ ವರದಿ ಹಾಗೂ ಡಿಎನ್ಎ ವರದಿಗಳಿಗಾಗಿ ಕಾಯುತ್ತಿದ್ದರು. ಇದೀಗ ಆ ವರದಿಗಳು ಕೈ ಸೇರುತ್ತಿದ್ದಂತೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಅಫ್ತಾಬ್ ಚಂದನಕಟ್ಟಿ, ಮದರ್ಸಾಬ್ ಮಂಡಕ್ಕಿ, ಸಮೀವುಲ್ಲಾ ಲಾಲಾನವರ, ಶೋಯೆಬ್ ನಿಯಾಜ್ ಅಹ್ಮದ್ ಮುಲ್ಲಾ, ಮೊಹಮ್ಮದ್ ಸಾದೀಕ್, ತೌಷಿಪ್, ರಿಯಾಜ್ ಸಾವಿಕೇರಿ ಪ್ರಮುಖ ಆರೋಪಿಗಳಾಗಿದ್ದಾರೆ.