ಮುಡಾ ಹಗರಣ : ಇಡಿ ಕೈಸೇರಿದ ಮಹತ್ವದ ದಾಖಲೆ …..!?

ಮೈಸೂರು

    ಮುಡಾ ಹಗರಣ ಸಂಬಂಧ ಮೈಸೂರಿನ ಕಚೇರಿ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಎರಡನೇ ದಿನವೂ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿಯ ಮನವಿ ಪತ್ರದ ಮೇಲೆಯೇ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಪತ್ರದ ಬಗ್ಗೆ ಹತ್ತಾರು ಅನುಮಾನಗಳೇ ಹುಟ್ಟುಕೊಂಡಿವೆ. ಇದನ್ನೇ ಅರಿತ ಇಡಿ ಅಧಿಕಾರಿಗಳು ಮಹತ್ವದ ಸಾಕ್ಷಿಯೊಂದನ್ನ ಕಲೆ ಹಾಕಿದ್ದಾರೆ. ಮುಡಾ ಅಧಿಕಾರಿಗಳಿಗೆ ಸಿದ್ದರಾಮಯ್ಯ ಪತ್ನಿ ನೀಡಿದ್ದ ಮನವಿ ಪತ್ರದಲ್ಲಿ ಎರಡು ಅನುಮಾನಗಳು ಉಂಟಾಗಿವೆ. ಮನವಿ ಪತ್ರದಲ್ಲಿ ವೈಟ್ನರ್ ಹಾಕಿರುವುದು ಪತ್ತೆಯಾಗಿದೆ. ಮನವಿ ಪತ್ರದ 2ನೇ ಪುಟದಲ್ಲಿದ್ದ ಖಾಲಿ ಜಾಗಕ್ಕೆ ವೈಟ್ನರ್ ಹಾಕಲಾಗಿತ್ತು. ಆದರೆ, ಇದರ ಮಧ್ಯೆಯೇ ವೈಟ್ನರ್ ಹಾಕದಿರುವ ಪತ್ರ ಕೂಡ ಇಡಿ ಅಧಿಕಾರಿಗಳಿಗೆ ಸಿಕ್ಕಿದೆ. 

   ವೈಟ್ನರ್ ಹಾಕಿದ ದಾಖಲೆಯಿಂದಲೇ ಸಿದ್ದರಾಮಯ್ಯಗೆ ಸಂಕಷ್ಟ ತರಲಿದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಸಿಎಂ ಬಿಡುಗಡೆ ಮಾಡಿರುವ ದಾಖಲೆ ಹಾಗೂ ಆರ್​ಟಿಐನಲ್ಲಿ ನೀಡಿದ್ದ ದಾಖಲೆ ಬೇರೆ ಬೇರೆ ಇದೆ. ವೈಟ್ನರ್​ನಲ್ಲೂ ವ್ಯತ್ಯಾಸ ಕಂಡು ಬಂದಿದೆ. ಇದಿಷ್ಟೇ ಅಲ್ಲ, 2 ದಾಖಲೆಗಳಲ್ಲಿ ಸಿಎಂ ಪತ್ನಿಯ ಸಹಿಯಲ್ಲಿಯೂ ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದೆ. ಎರಡೂ ದಾಖಲೆಗಳನ್ನು ಮುಂದಿಟ್ಟುಕೊಂಡು ಮುಡಾ ಅಧಿಕಾರಿಗಳಿಗೆ ಇಡಿ ಅಧಿಕಾರಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಅಸಲಿ ಪತ್ರ ಯಾವುದು, ನಕಲಿ ಯಾವುದು ಎಂದು ಅಧಿಕಾರಿಗಳ ಬಾಯಿಬಿಡಿಸಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. 

   ಮುಡಾದಲ್ಲಿ 50:50 ಅನುಪಾತದಡಿ ಎಷ್ಟೆಲ್ಲಾ ಸೈಟ್​ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆಯೂ ಇಡಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಶಿಫಾರಸು ಪತ್ರಗಳ ಜಾಡು ಹಿಡಿದು ತನಿಖೆ ಮಾಡಿರುವ ಇಡಿ ಅಧಿಕಾರಿಗಳು, ಮುಡಾದಲ್ಲಿ ಸದಸ್ಯರಾಗಿದ್ದ ರಾಜಕೀಯ ನಾಯಕರ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದಾರೆ. ಯಾರು ಯಾರಿಗೆ 50:50 ಅನುಪಾತದ ಸೈಟ್​ಗೆ ಶಿಫಾರಸು ಮಾಡಿದ್ದರು? ಯಾರು ಯಾರಿಗೆ ಬದಲಿ ನಿವೇಶನಗಳನ್ನು ಕೊಡಿಸಿದ್ದರು? ಹೀಗೆ ಹತ್ತಾರು ಆಯಾಮದ ಮೂಲಕ ಇಡಿ ತನಿಖೆ ಮಾಡುತ್ತಿದೆ. ಇನ್ನು ಹಗರಣ ಬಯಲಿಗೆಳೆಯಬಲ್ಲ ಎಲ್ಲಾ ಮೂಲ ಶಿಫಾರಸು ಪತ್ರಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

Recent Articles

spot_img

Related Stories

Share via
Copy link
Powered by Social Snap