ರಾಮನಗರ:
ಬಿಡದಿಯಲ್ಲಿರುವ ಪ್ರತಿಷ್ಠಿತ ಕಂಪನಿಯ ಕಾರ್ಖಾನೆಯ ಶೌಚಾಲಯದಲ್ಲಿ ಪಾಕಿಸ್ತಾನ ಪರ ಬರಹ ಬರೆದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕರ್ನಾಟಕದ ಹೈಮದ್ ಹುಸೇನ್ (24) ಮತ್ತು ಸಾದಿಕ್ (20) ಬಂಧಿತ ಆರೋಪಿಗಳು. ಇವರು ಟೊಯೋಟಾ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳು ಮಾರ್ಚ್ 15ರಂದು ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಬರಹ ಬರೆಯುವುದರ ಜೊತೆಗೆ ಕನ್ನಡಿಗರ ಬಗ್ಗೆಯೂ ಅವಹೇಳನ ಪದ ಬಳಸಿದ್ದರು. ಕಾರ್ಖಾನೆಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನ ಕೀ ಜೈ, ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಬರೆದಿದ್ದರು. ಜೊತೆಗೆ ಕನ್ನಡಿಗರನ್ನು ಅವಹೇಳನಕಾರಿ ಭಾಷೆಯಲ್ಲಿ ನಿಂದಿಸಿದ್ದರು. ಹೀಗಾಗಿ ದೇಶದ್ರೋಹದ ಆರೋಪದಡಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ.
ಈ ಕಾರ್ಖಾನೆಯಲ್ಲಿ 2 ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದು, ಮೂರು ಪಾಳಿಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಪ್ರತಿ ಪಾಳಿಯಲ್ಲಿ 600 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮಾರ್ಚ್ 16ರಂದು ಮೊದಲನೇ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಕಿಡಿಗೇಡಿಗಳು, ಈ ರೀತಿ ಬರೆದಿದ್ದಾರೆ. ಆರಂಭದಲ್ಲಿ ಈ ಅಪರಾಧವನ್ನು ಕಂಪನಿ ಮುಚ್ಚಿ ಹಾಕಲು ಪ್ರಯತ್ನಿಸಿತ್ತು. ನೋಟಿಸ್ ಬೋರ್ಡ್ ನಲ್ಲಿ ಈ ರೀತಿ ಮಾಡದಂತೆ ಎಚ್ಚರಿಕೆ ಕೊಡಲಾಗಿತ್ತು. ನಂತರ ಈ ಗೋಡೆ ಬರಹದ ಫೋಟೊ ವೈರಲ್ ಆಗಿದ್ದು, ಬಿಡದಿ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ಕಿಡಿಗೇಡಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಕಾರ್ಖಾನೆ ಬಳಿ ಜಮಾಯಿಸಿದ್ದರು. ಪ್ರತಿಭಟನೆ ನಡೆಸಿ ಕಂಪನಿಯ ಆಡಳಿತ ಮಂಡಳಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದರು. ದೇಶದ್ರೋಹಿ ಪದ ಬಳಸಿದ ಹಾಗೂ ಕನ್ನಡಿಗರನ್ನು ನಿಂದಿಸಿರುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಆಗ್ರಹಿಸಿದ್ದರು.
ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಸೋತ ನಂತರ ಸಹೋದ್ಯೋಗಿಗಳು ಇಬ್ಬರನ್ನು ಕೀಟಲೆ ಮಾಡಿದ್ದು, ಇದರಿಂದ ಗೋಡೆ ಬರಹ ಬರೆದಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.ಪ್ರಕರಣ ಸಂಬಂಧ 800 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಪ್ರಶ್ನಿಸಲಾಗಿತ್ತು. ಶೌಚಾಲಯದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗಿದೆ, ಕೈಬರಹ ಮತ್ತು ಭಾಷಾ ಮಾದರಿಗಳನ್ನು ಪರಿಶೀಲಿಸಿ, ನಂತರ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
