ವಿನಯ್‌ ಕುಲಕರ್ಣಿಗೆ ಕೋರ್ಟ್ ಕೇವಲ 2 ದಿನ ಜಾಮೀನು ಕೊಟ್ಟಿದ್ಯಾಕೆ?

ಬೆಂಗಳೂರು

    ಧಾರವಾಡ  ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಗೌಡರ ಕೊಲೆ ಪ್ರಕರಣದ  ಸಾಕ್ಷಿ ನಾಶ ಆರೋಪದ ಜೈಲು ಪಾಲಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ  ಎರಡು ದಿನದ ಮಟ್ಟಿಗೆ ಜಾಮೀನು ಸಿಕ್ಕಿದೆ. ಪುತ್ರನ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಸಿಬಿಐನಿಂದ ಬಂಧಿತರಾಗಿರುವ ಶಾಸಕ ವಿನಯ್ ಕುಲಕರ್ಣಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಎರಡು ದಿನಗಳ ಕಾಲ ಮಧ್ಯಂತರ ಜಾಮೀನು  ನೀಡಿ ಆದೇಶ ಹೊರಡಿಸಿದೆ.

    ಈ ಹಿಂದೆ ಸಿಬಿಐನಿಂದ ಬಂಧಿತರಾಗಿ ಸೆರೆವಾಸ ಅನುಭವಿಸಿದ್ದ ವಿನಯ್ ಕುಲಕರ್ಣಿ, ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪದ ಮೇಲೆ ಸುಪ್ರೀಂಕೋರ್ಟ್​ ಜಾಮೀನು ರದ್ದು ಮಾಡಿತ್ತು. ಇದರಿಂದ ವಿನಯ್ ಕುಲಕರ್ಣಿ ಮರಳಿ ಪರಪ್ಪನ ಅಗ್ರಹಾರ ಸೇರಬೇಕಾಯಿತು. ಈಗ ತಮ್ಮ ಮಗ ಹೇಮಂತ್ ಅವರಿಗೆ ಅಪಘಾತವಾಗಿದ್ದರಿಂದ ಆತನ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ.

   ಹೀಗಾಗಿ ಜಾಮೀನು ನೀಡುವಂತೆ ವಿನಯ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಶಾಸಕ ವಿನಯ್ ಕುಲಕರ್ಣಿ ಅವರಿಗೆ ಕೇವಲ ಎರಡು ದಿನಗಳವರೆಗೆ ಮಾತ್ರ ಜಾಮೀನು ಮಂಜೂರು ಮಾಡಿದ್ದು, ಸೆಪ್ಟೆಂಬರ್ 11ರ ಸಂಜೆ 5ಕ್ಕೆ ಸಿಬಿಐ ಅಧಿಕಾರಿಗಳ ಎದುರು ಹಾಜರಾಗಿ ಮರಳಿ ಜೈಲು ಸೇರಬೇಕಿದೆ. 

   ಸದ್ಯ ಎರಡು ದಿನಗಳ ಕಾಲ ಜಾಮೀನು ಸಿಕ್ಕಿರುವ ವಿನಯ್ ಕುಲಕರ್ಣಿ ಅವರನ್ನು ಮಂಗಳವಾರ ಸಂಜೆಯೇ ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ವಿನಯ್ ಕುಲಕರ್ಣಿ ಅವರ ಪುತ್ರ ಹೇಮಂತ್ ಅವರ ಕಾಲಿನ ಶಸ್ತ್ರ ಚಿಕಿತ್ಸೆ ಬೆಂಗಳೂರಿನಲ್ಲೇ ನಡೆಯುವುದರಿಂದ ವಿನಯ್ ಅವರು ಬೆಂಗಳೂರಿನಲ್ಲೇ ಉಳಿಯಬೇಕಾಗಿದೆ. ಜಾಮೀನು ಸಿಕ್ಕಿರುವ ಈ ಎರಡು ದಿನಗಳ ಅವಧಿಯಲ್ಲಿ ಯಾವುದೇ ಸಭೆ ಮಾಡುವಂತಿಲ್ಲ ಎಂದು ಶಾಸಕ ವಿನಯ್‌ಗೆ ನ್ಯಾಯಾಲಯ ಸೂಚನೆ ನೀಡಿದೆ.

Recent Articles

spot_img

Related Stories

Share via
Copy link