2 ದಿನಗಳ ವಿದ್ಯಾಪ್ರಗತಿ ಮೇಳಕ್ಕೆ ಯಶಸ್ವಿ ತೆರೆ

ತುಮಕೂರು:

ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಜಾಪ್ರಗತಿ ದಿನಪತ್ರಿಕೆ ಹಾಗೂ ಪ್ರಗತಿ ಟಿವಿಯಿಂದ ಆ್ಯಡ್ 6 ಸಂಸ್ಥೆ ಪ್ರಧಾನ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿದ್ಯಾಪ್ರಗತಿ ಮೇಳ ಭಾನುವಾರ ಸಂಜೆ ಅರ್ಥಪೂರ್ಣ ತೆರೆಕಂಡಿತು.

ಸಮಾರೋಪ ಭಾಷಣ ಮಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ವಿದ್ಯೆ ಎಂದಿಗೂ ಸೋಮಾರಿಗಳ ಸ್ವತ್ತಾಗುವುದಿಲ್ಲ. ಅದು ಸಾಧಕನ ಸ್ವತ್ತು. ಸಮಾಜದಲ್ಲಿ ವಿದ್ಯಾವಂತರಿಗೆ ಅಮೂಲ್ಯ ಬೆಲೆ ಇದೆ. ವಿದ್ಯೆ ಕಲಿಯಲು ಏನೆಲ್ಲ ಖರ್ಚು ಮಾಡುತ್ತೇವೆ ಅದನ್ನು ವೆಚ್ಚವೆಂದು ಭಾವಿಸದೆ ಮಕ್ಕಳನ್ನು ಆಸ್ತಿಯನ್ನಾಗಿ ಮಾಡುವ ಬಂಡವಾಳ ಎಂದು ಭಾವಿಸಬೇಕು ಎಂದು ಪೋಷಕರಿಗೆ ತಿಳಿ ಹೇಳಿದರು.

ಭಾರತದಲ್ಲಿ ಉನ್ನತ ಶಿಕ್ಷಣ ದುಬಾರಿಯಾಗಿರುವ ಕಾರಣಕ್ಕೆ ಉಕ್ರೇನ್‍ನಲ್ಲಿ ನಮ್ಮ ವಿದ್ಯಾರ್ಥಿಗಳು ಹೋಗಿ ಯುದ್ದದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದರು. ಕೆಲವು ಶಿಕ್ಷಣ ಸಂಸ್ಥೆಗಳು ಹಣವನ್ನೇ ಪ್ರಧಾನವಾಗಿಸಿಕೊಂಡಿರುವುದು ಸರಿಯಲ್ಲ. ಉನ್ನತ ಶಿಕ್ಷಣ ರಾಜ್ಯದಲ್ಲಿ ಸುಲಭವಾಗಿ ಕೈಗೆಟುಕುವಂತಾಗಬೇಕು.

ಇನ್ನೂ ಯುಜಿಸಿಯವರು ಕಾಲೇಜುಗಳ ಮೂಲ ಸೌಕರ್ಯ ಪರಿಗಣಿಸದೆ ಬರೀ ಸಿಬ್ಬಂದಿ ವೇತನ ಸೌಲಭ್ಯವನ್ನೇಅಳತೆಗೋಲಾಗಿ ಪರಿಗಣಿಸುವುದು ಸರಿಯಲ್ಲ. ಶಿಕ್ಷಣ ಸಂಸ್ಥೆಗಳು ನಡೆಸುವುದು ಕಷ್ಟವಿದೆ ಎಂದು ರಾಜಣ್ಣ ನುಡಿದರು.

ಉಜ್ವಲ ಭವಿಷ್ಯಕ್ಕೆ ಸಹಕಾರಿ:

ಪ್ರಜಾಪ್ರಗತಿ -ಪ್ರಗತಿ ಟಿವಿಯ ಸಂಪಾದಕರಾದ ಎಸ್.ನಾಗಣ್ಣ ಅವರ ಸಾರಥ್ಯದಲ್ಲಿ ಆಯೋಜಿಸಿರುವ ಈ ವಿದ್ಯಾಪ್ರಗತಿ ಮೇಳ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡುಕೊಳ್ಳಲು ಸಹಕಾರಿಯೆನಿಸಿದೆ.

ಹೊಸ ಸಿನಿಮಾ ಥಿಯೇಟರ್‍ನಲ್ಲಿ ರಿಲೀಸ್ ಆದಾಗ ಪ್ರೇಕ್ಷಕರು ಬರುವಂತೆ ವಿದ್ಯಾಮೇಳದ ಉದ್ಘಾಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಂದಿದ್ದರು, ರಾಜಧಾನಿ, ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳನ್ನು ಒಂದೇ ಕಡೆ ಸಮಾವೇಶಗೊಳಿಸಿದ್ದು, ಒಳ್ಳೆಯ ಬೆಳವಣಿಗೆ. ಇಂತಹ ಶಿಕ್ಷಣ ಮೇಳ ನಿರಂತರವಾಗಿ ಜರುಗಲಿ ಎಂದು ಆಶಿಸಿದರು.

ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ:

ಮುಖ್ಯ ಅತಿಥಿಯಾಗಿ ನಗರ ಶಾಸಕ ಹಾಗೂ ಸಿಐಟಿ ವಿದ್ಯಾಸಂಸ್ಥೆ ಮುಖ್ಯಸ್ಥ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ ಜಿಲ್ಲೆಯ ಶಿಕ್ಷಣಸಂಸ್ಥೆಗಳು ರಾಜಧಾನಿ ಬೆಂಗಳೂರಿಗೆ ತೆರಳಿ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದವು.

ಆದರೆ ಪ್ರಜಾಪ್ರಗತಿ-ಪ್ರಗತಿ ಟಿವಿಯವರು ತುಮಕೂರಿನಲ್ಲೇ ಮೇಳವನ್ನು ಸಂಘಟಿಸಿ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿ, ವಿದ್ಯಾರ್ಥಿಗಳ ಆಯ್ಕೆಯ ಅವಕಾಶವನ್ನು ಒಂದೇ ಸೂರಿನಡಿ ಕಲ್ಪಿಸಿರುವುದು ಮಹತ್ವದ ಬೆಳವಣಿಗೆ. ತುಮಕೂರಿನ ಸರಕಾರಿ ಜೂನಿಯರ್ ಕಾಲೇಜು ಮೈದಾನವನ್ನು ಇಂತಹ ಶಿಕ್ಷಣ, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳಿಗೊಂದೇ ಅಭಿವೃದ್ಧಿಗೊಳಿಸಿ ಮೀಸಲಿರಿಸಲಾಗಿದೆ ಎಂದರು.

ಕುಲಪತಿ ಪ್ರೊ.ಸಿದ್ದೇಗೌಡರಿಗೆ ಗೌರವ ಸನ್ಮಾನ:

ಸನ್ಮಾನ ಸ್ವೀಕರಿಸಿ ಮಾತನಾಡಿದ ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು ಪತ್ರಿಕೆ, ಟಿವಿ ಎರಡನ್ನು ಸಮಾಜಮುಖಿಯಾಗಿ ರಾಜಧಾನಿಯವರೆಗೂ ಕೊಂಡೊಯ್ಯುತ್ತಿರುವ ಎಸ್.ನಾಗಣ್ಣ ಮತ್ತು ಅವರ ಮಕ್ಕಳ ಕೊಡುಗೆಯನ್ನು ಮೆಚ್ಚಲೆಬೇಕಿದೆ.

ಮನುಷ್ಯರು ಸ್ವಾರ್ಥಪರವಾಗಿ ಚಿಂತಿಸದೆ ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಬೇಕೆಂದು ಬಯಸಿದಾಗ ಇಂತಹ ಶಿಕ್ಷಣ ಮೇಳವನ್ನು ಸಂಘಟಿಸಲು ಸಾಧ್ಯ.

ಸುಖೀ ಸಮಾಜ ನಿರ್ಮಾಣಕ್ಕೆ ವಿದ್ಯಾವಂತರು ಕೊಡುಗೆ ನೀಡಬೇಕಿದೆ ಎಂದರು. ಸಮಾರೋಪ ಸಮಾರಂಭದಲ್ಲಿ ಪ್ರಜಾಪ್ರಗತಿ ಸಹ ಸಂಪಾದಕ ಟಿ.ಎನ್.ಮಧುಕರ್, ಪ್ರಗತಿ ಟಿವಿ ಸಿಇಓ ಟಿ.ಎನ್.ಶಿಲ್ಪಶ್ರೀ, ಮಾಲೀಕರಾದ ಶಾರದಾ ನಾಗಣ್ಣ, ಆ್ಯಡ್6 ಸಂಸ್ಥೆ ಮುಖ್ಯಸ್ಥರಾದ ಸುಧಾಕರ್, ಸರ್ವೋದಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಸೀತಾರಾಂ,

ಸಿಐಟಿ ನಿರ್ದೇಶಕ ಸುರೇಶ್, ಎಚ್.ಎಂಎಸ್ ಯುನಾನಿ ಸಂಸ್ಥೆಯ ಡಾ.ನಜೀಮುದ್ದೀನ್ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ಪ್ರಮುಖರು ಹಾಜರಿದ್ದರು. ಸುರಭಿಜೈನ್ ಕಾರ್ಯಕ್ರಮ ನಿರೂಪಿಸಿದರು.ಸಮಾರೋಪಕ್ಕೂ ಮುನ್ನ ಮೇಳದಲ್ಲಿ ಪಾಲ್ಗೊಂಡ ಪ್ರತೀ ಶಿಕ್ಷಣ ಸಂಸ್ಥೆಗಳವರಿಗೂ ನೆನಪಿನ ಕಾಣಿಕೆಯನ್ನು ಗಣ್ಯ ಅತಿಥಿಗಳು ವಿತರಿಸಿದರು.

ಇಂದು ಕರ್ನಾಟಕ ಐಟಿ-ಬಿಟಿಯಲ್ಲಿ ಪ್ರಖ್ಯಾತಿಗಳಿಸಿದೆಯೆಂದರೆ ಸರಕಾರಕ್ಕೆ ಪೂರಕವಾಗಿ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಕಾರಣ. 60ರದಶಕದಲ್ಲೇ ಸಿದ್ಧಗಂಗಾ, ರಾಮಯ್ಯ ಶಿಕ್ಷಣ ಸಂಸ್ಥೆಗಳು ತಾಂತ್ರಿಕ ಕಾಲೇಜುಗಳನ್ನು ತೆರೆದು ಹೊಸ ತಾಂತ್ರಿಕ ಕ್ರಾಂತಿಗೆ ನಾಂದಿ ಹಾಡಿದವು. ಆರಂಭದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳ ಲಭ್ಯತೆಯೇ ಕಷ್ಟವಾಗಿತ್ತು.

ಆದರೆ ಕಾಲೇಜುಗಳು ಹೆಚ್ಚಾಗಿ ಗುಣಾತ್ಮಕತೆಯಲ್ಲಿ ಪೈಪೋಟಿ ಉಂಟಾಗಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದ ಪರಿಸ್ಥಿತಿಯೂ ಬದಲಾಗಲಿದೆ. ಕಡಿಮೆ ಶುಲ್ಕದಲ್ಲಿ ವೈದ್ಯರಾಗುವ ಅವಕಾಶ ಸಿಗಲಿದೆ.

-ಜಿ.ಬಿ.ಜ್ಯೋತಿಗಣೇಶ್ ಶಾಸಕರು, ತುಮಕೂರು.

ತುಮಕೂರಿನಲ್ಲಿ ಪ್ರಪ್ರಥಮ ಬಾರಿಗೆ ವಿದ್ಯಾಪ್ರಗತಿ ಮೇಳ ಸಂಘಟಿಸಿದಾಗ ಆರಂಭದಲ್ಲಿ ಶಿಕ್ಷಣ ಮೇಳ ಯಶಸ್ವಿಯಾಗುತ್ತೋ, ಇಲ್ಲವೋ ಎಂಬ ಅಂಜಿಕೆಯಿತ್ತು. ಸಿದ್ಧಗಂಗೆಯ ಡಾ.ಶಿವಕುಮಾರಸ್ವಾಮೀಜಿ ಅವರ ಕೃಪಾಶೀರ್ವಾದದಿಂದ ಕಳೆದ 35 ವರ್ಷಗಳಿಂದ ಪತ್ರಿಕೋದ್ಯಮದಲಿ ಪ್ರಗತಿಯತ್ತ ಸಾಗುತ್ತಿರುವಂತೆ ವಿದ್ಯಾಪ್ರಗತಿ ಮೇಳವೂ ಯಶಸ್ಸುಕಂಡಿದೆ.

ನಲವತ್ತಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು, ಸಾವಿರಾರು ವಿದ್ಯಾರ್ಥಿಗಳು ವಿದ್ಯಾಪ್ರಗತಿ ಮೇಳದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಜನಪ್ರತಿನಿಧಿಗಳು, ಆಡಳಿತ, ಶಿಕ್ಷಣ ಇಲಾಖೆ, ವಿದ್ಯಾಸಂಸ್ಥೆಗಳ ಸಹಕಾರ ಈ ಸಂದರ್ಭದಲ್ಲಿ ಸ್ಮರಣೀಯ. ತುಮಕೂರಿಗೆ ಆ್ಯಡ್ 6 ಸಂಸ್ಥೆಯವರು ಶಿಕ್ಷಣ ಮೇಳವನ್ನು ಪರಿಚಯಿಸಿದ್ದು, ಮುಂದಿನ ದಿನಗಳಲ್ಲಿ ತುಮಕೂರಿನ ಜನತೆಗೆ ಅನುಕೂಲವಾಗುವ ಮತ್ತಷ್ಟು ಮೇಳಗಳು ನಡೆಯಲಿವೆ.

-ಎಸ್.ನಾಗಣ್ಣ, ಸಂಪಾದಕರು, ಪ್ರಜಾಪ್ರಗತಿ-ಪ್ರಗತಿ ಟಿವಿ.

40 ಕಾಲೇಜುಗಳು, 2500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ನಲವತ್ತಕ್ಕೂ ಅಧಿಕ ಸಂಖ್ಯೆಯ ರಾಜಧಾನಿ, ಜಿಲ್ಲೆಯ ಪ್ರತಿಷ್ಠಿತ ವಿವಿಗಳು, ಕಾಲೇಜುಗಳು 2 ದಿನಗಳ ಮೇಳದಲ್ಲಿ ಪಾಲ್ಗೊಂಡು, ಎರಡೂವರೆ ಸಾವಿರಕ್ಕೂ ಅಧಿಕ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳು, ಪೋಷಕರಿಗೆ ಕಾಲೇಜು ಸೌಲಭ್ಯಗಳು, ಕೋರ್ಸ್‍ಗಳ ವಿಸ್ತøತ ಮಾಹಿತಿ ಒದಗಿಸಿದರು.

ವಿದ್ಯಾಪ್ರಗತಿ ಮೇಳದ ಕುರಿತು ಅನಿಸಿಕೆ ಹಂಚಿಕೊಂಡ ವಿದ್ಯಾರ್ಥಿಗಳು ತುಮಕೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಒಂದೇ ಸೂರಿನಡಿ ರಾಜಧಾನಿ, ಜಿಲ್ಲೆಯ ಕಾಲೇಜುಗಳನ್ನು ತಿಳಿಯಲು ಸಾಧ್ಯವಾಯಿತು. ಏನೆಲ್ಲ ಕೋರ್ಸ್‍ಗಳಿವೆ, ನಮಗೆ ಯಾವುದು ಸೂಕ್ತ ಎಂಬುದನ್ನು ಮನದಟ್ಟುಮಾಡಿಕೊಳ್ಳಲು ಮೇಳ ಪ್ರಯೋಜನಕಾರಿಯಾಯಿತು. ಮೇಳದಲ್ಲೆ ನಡೆದ ವಿವಿಧ ಗೋಷ್ಠಿಗಳು ನಮ್ಮ ಅರಿವನ್ನು ವಿಸ್ತರಿಸಿ ವಿಸ್ತರಿಸಿ, ಉಜ್ವಲ ಭವಿಷ್ಯದ ಮಾರ್ಗದರ್ಶನ ಮಾಡಿದವು ಎಂದರು.

ಪ್ರಜಾಪ್ರಗತಿ-ಪ್ರಗತಿ ಟಿವಿಯಿಂದ ಆಯೋಜಿಸಿದ್ದ ವಿದ್ಯಾಪ್ರಗತಿ ಮೇಳದ ಸಮಾರೋಪದಲ್ಲಿ ಮಾಜಿ ಶಾಸಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಸಹ ಸಂಪಾದಕ ಟಿ.ಎನ್.ಮಧುಕರ್, ಪ್ರಗತಿ ಟಿವಿ ಸಿಇಓ ಟಿ.ಎನ್.ಶಿಲ್ಪಶ್ರೀ, ಶಾರದಾನಾಗಣ್ಣ, ಆ್ಯಡ್ 6 ಸಂಸ್ಥೆಯ ಮುಖ್ಯಸ್ಥ ಸುಧಾಕರ್ ವೇದಿಕೆಯಲ್ಲಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap