ಮಂಗಳೂರು:
ಜೂನ್ 17ರ ಮಧ್ಯರಾತ್ರಿ ನಗರದ ಹೊರವಲಯದ ಜಪ್ಪಿನಮೊಗರುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ್ದ ಕಾರು ಅಪಘಾತದಲ್ಲಿ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರು ಯುವಕರು ಸಾವಿಗೀಡಾಗಿದ್ದಾರೆ. ಎನ್ಎಸ್ಯುಐ ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ ಹಾಗೂ ಕದ್ರಿ ನಿವಾಸಿ ಅಮನ್ ರಾವ್ ಮೃತಪಟ್ಟವರು. ರಾತ್ರಿ ವೇಳೆ ಸಂಭವಿಸಿದ ಭೀಕರ ಅಪಘಾತಕ್ಕೆ ಮದ್ಯಪಾನ ಮಾಡಿ ಅತಿವೇಗವಾಗಿ ಕಾರು ಚಾಲನೆ ಮಾಡಿರುವುದೇ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಅತಿಯಾದ ವೇಗ, ಡ್ರಿಂಕ್ & ಡ್ರೈವ್ ಅಡಿ ಪ್ರಕರಣ ದಾಖಲಾಗಿದೆ.
ಮಧ್ಯರಾತ್ರಿವರೆಗೂ ಪಾರ್ಟಿ ಮಾಡಿದ್ದ ಐವರು ಯುವಕರು ಬಳಿಕ ಕಾರಿನಲ್ಲಿ ತಲಪಾಡಿಯಿಂದ ಮಂಗಳೂರಿನ ಕಡೆಗೆ ಹೊರಟಿದ್ದರು. ಪೊಲೀಸರ ಪ್ರಕಾರ ಕಾರು ಗಂಟೆಗೆ 192 ಕಿಲೋಮೀಟರ್ ವೇಗದಲ್ಲಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಐವರು ಯುವಕರ ಪೈಕಿ ಓಂಶ್ರೀ ಪೂಜಾರಿ ಹಾಗೂ ಕದ್ರಿ ನಿವಾಸಿ ಅಮನ್ ರಾವ್ ಮೃತಪಟ್ಟಿದ್ದು, ವಂಶಿ ಮತ್ತು ಆಶಿಕ್ಗೆ ಗಂಭೀರ ಗಾಯಗಳಾಗಿವೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಟಲಿ ಮೂಲದ ಇನ್ನೊಬ್ಬ ಗೆಳೆಯ ಜೆರ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ಅತೀ ವೇಗಕ್ಕೆ ಫೋಕ್ಸ್ ವೇಗನ್ ಕಾರು ಅಪ್ಪಚ್ಚಿಯಾಗಿದೆ.
