KSRTC ಬಸ್ ಚಕ್ರದಡಿ ಸಿಲುಕಿ ಇಬ್ಬರ ದುರ್ಮರಣ!

ದೊಡ್ಡಬಳ್ಳಾಪುರ:

   ಕೆಎಸ್‌ಆರ್‌ಟಿಸಿ ಬಸ್ ಚಕ್ರಕ್ಕೆ ಸಿಲುಕಿ ಮಗು ಸೇರಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆಯೊಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಪಸಿಹಳ್ಳಿ ಬಳಿ ಗುರುವಾರ ನಡೆದಿದೆ.

    ಮೃತರನ್ನು ವೆಂಕಟೇಶ್​ ಮೂರ್ತಿ (28 ) ಮತ್ತು ಮೋಕ್ಷಿತಾ (8) ಎಂದು ಗುರ್ತಿಸಲಾಗಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಹಿಳೆ ಹಾಗೂ ಇಬ್ಬರು ಮಕ್ಕಳೊಂದಿಗೆ ವೆಂಕಟೇಶ್ ಅವರು ದೊಡ್ಡಹಳ್ಳಾಪುರಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಪಿಎಸ್‌ಆರ್‌ಟಿಸಿ) ಬಸ್ ದ್ವಿಚಕ್ರ ವಾಹನವನ್ನು ಓವರ್‌ಟೇಕ್ ಮಾಡುವ ವೇಳೆ ಹ್ಯಾಂಡಲ್‌ಗೆ ಸ್ಪರ್ಶಿಸಿದೆ. ಈ ವೇಳೆ ಮೂರ್ತಿ ಅವರ ವಾಹನ ನಿಯಂತ್ರಣ ತಪ್ಪಿದ್ದು, ನಾಲ್ವರೂ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಕ್ರಕ್ಕೆ ಸಿಲುಕಿ ಮೂರ್ತಿಯವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬಾಲಕಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ.ಎರಡೂ ಬಸ್‌ಗಳು ಹಿಂದೂಪುರ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ವೆಂಕಟೇಶ್ ಅವಿವಾಹಿತರಾಗಿದ್ದು, ಸಹೋದರಿಯ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಘಟನೆ ಬಳಿಕ ಇಬ್ಬರೂ ಬಸ್ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Recent Articles

spot_img

Related Stories

Share via
Copy link