ಬೊಮ್ಮಸಂದ್ರದಲ್ಲಿ 80 ಸಾವಿರ ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಿಎಂ ಅಸ್ತು

ಬೆಂಗಳೂರು:

     ಬೊಮ್ಮಸಂದ್ರದ ಸೂರ್ಯ ನಗರದಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣವನ್ನು ಹೊಂದಿರುವ ವಿಶ್ವ ದರ್ಜೆಯ ಕ್ರೀಡಾ ಸಂಕೀರ್ಣವನ್ನು ನಿರ್ಮಿಸುವ ಕರ್ನಾಟಕ ವಸತಿ ಮಂಡಳಿ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದ್ದಾರೆ. ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಎಚ್‌ಬಿ ಅಧಿಕಾರಿಗಳು ಕ್ರೀಡಾಂಗಣದ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

    ಕೆಲವು ತಿಂಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗುತ್ತದೆ. ಕ್ರೀಡಾಂಗಣ ಪೂರ್ಣಗೊಂಡ ನಂತರ, ಇದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ನಂತರ ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಲಿದೆ. ಮೋದಿ ಸ್ಟೇಡಿಯಂ 1,32,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ.

   1,650 ಕೋಟಿ ರೂಪಾಯಿಗಳ ಈ ಯೋಜನೆಗೆ ರಾಜ್ಯ ಸರ್ಕಾರದ ಆರ್ಥಿಕ ಬೆಂಬಲವಿಲ್ಲದೆ ಕೆಎಚ್‌ಬಿ ಸಂಪೂರ್ಣವಾಗಿ ಹಣಕಾಸು ಒದಗಿಸಲಿದೆ. 100 ಎಕರೆ ಪ್ರದೇಶದಲ್ಲಿ ಹರಡಿರುವ ಈ ಪ್ರಸ್ತಾವಿತ ಸಂಕೀರ್ಣವು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಿದೆ. ಕ್ರಿಕೆಟ್ ಕ್ರೀಡಾಂಗಣದ ಜತೆಗೆ, ಎಂಟು ಒಳಾಂಗಣ ಮತ್ತು ಎಂಟು ಹೊರಾಂಗಣ ಕ್ರೀಡೆಗಳು, ಅತ್ಯಾಧುನಿಕ ಜಿಮ್‌ಗಳು, ತರಬೇತಿ ಕೇಂದ್ರಗಳು, ಈಜುಕೊಳಗಳು, ಅತಿಥಿ ಗೃಹಗಳು, ಹಾಸ್ಟೆಲ್‌ಗಳು, ತ್ರೀ-ಸ್ಟಾರ್ ಮತ್ತು ಫೈವ್-ಸ್ಟಾರ್ ಹೋಟೆಲ್‌ಗಳು ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯವಿರುವ ಸಮಾವೇಶ ಸಭಾಂಗಣವನ್ನು ಇದು ಒಳಗೊಂಡಿರುತ್ತದೆ.

   ಜೂನ್‌ನಲ್ಲಿ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತ ಘಟನೆ ಕುರಿತು ವಿಚಾರಣೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ ಆಯೋಗವೂ, ಕ್ರಿಕೆಟ್ ಮೈದಾನದವನ್ನು ಹೊರ ವಲಯಕ್ಕೆ ಸ್ಥಳಾಂತರಿಸಲು ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ ನಗರದ ಹೊರವಲಯದಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಆರಂಭವಾಗಲಿದೆ.

Recent Articles

spot_img

Related Stories

Share via
Copy link