ಕೋಲ್ಕತ್ತಾ:
ಸುಳ್ಳು ಸುದ್ದಿ ಹರಡುವುದು, ಅದನ್ನು ಉತ್ತೇಜಿಸುವ ಮೂಲಕ ರಾಜಭವನದ ಘನತೆಗೆ ಕಳಂಕ ತಂದ ಆರೋಪದಲ್ಲಿ ಕೋಲ್ಕತ್ತದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಶಿಸ್ತು ಕ್ರಮ ಜರುಗಿಸಲು ಮುಂದಾಗಿದೆ.
ವಿನೀತ್ ಗೋಯಲ್ ಮತ್ತು ಕೋಲ್ಕತ್ತಾ ಪೊಲೀಸ್ ಡೆಪ್ಯುಟಿ ಕಮಿಷನರ್ (ಡಿಸಿಪಿ) ಸೆಂಟ್ರಲ್ ಇಂದಿರಾ ಮುಖರ್ಜಿ ಅವರು “ಸಾರ್ವಜನಿಕ ಸೇವಕರಿಗೆ ಸಂಪೂರ್ಣವಾಗಿ ಯೋಗ್ಯವಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಆರೋಪಿಸಿ ರಾಜ್ಯಪಾಲ ಸಿವಿ ಆನಂದ ಬೋಸ್ ವರದಿ ಸಲ್ಲಿಸಿದ ನಂತರ ಕೇಂದ್ರ ಸಚಿವಾಲಯ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿ ಹೇಳಿದ್ದಾರೆ.
ಜೂನ್ ಅಂತ್ಯದಲ್ಲಿ ಗೃಹ ಸಚಿವರಿಗೆ ಸಲ್ಲಿಸಿದ ಸಿ.ವಿ.ಆನಂದ ಬೋಸ್ ಅವರ ವರದಿಯಲ್ಲಿ, ಕೋಲ್ಕತ್ತಾ ಪೊಲೀಸ್ ಅಧಿಕಾರಿಗಳು ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರು ರಾಜ್ಯಪಾಲರ ಅನುಮತಿಯ ಹೊರತಾಗಿಯೂ ಅವರನ್ನು ಭೇಟಿಯಾಗದಂತೆ ತಡೆದಿರುವ ವಿಷಯಗಳನ್ನು ಎತ್ತಿ ತೋರಿಸಿದ್ದಾರೆ.
ಬೋಸ್ ಅವರ ವಿವರವಾದ ವರದಿಯನ್ನು ಆಧರಿಸಿ ಕೇಂದ್ರ ಗೃಹ ಸಚಿವಾಲಯವು ಐಪಿಎಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಿದೆ” ಎಂದು ಅಧಿಕಾರಿ ಪಿಟಿಐಗೆ ತಿಳಿಸಿದರು. ಪತ್ರದ ಪ್ರತಿಗಳನ್ನು ಜುಲೈ 4 ರಂದು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ.
2024ರ ಎಪ್ರಿಲ್-ಮೇ ಅವಧಿಯಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಮಾಡಿರುವ ಆರೋಪಗಳನ್ನು ಪ್ರಚಾರ ಮತ್ತು ಪ್ರೋತ್ಸಾಹಿಸುತ್ತಿದ್ದಾರೆ ಎಂದು ರಾಜಭವನದಲ್ಲಿ ನಿಯೋಜಿಸಲಾದ ಇತರ ಪೊಲೀಸ್ ಅಧಿಕಾರಿಗಳ ವಿರುದ್ಧವೂ ರಾಜ್ಯಪಾಲರು ಆರೋಪಿಸಿದ್ದಾರೆ.
“ಈ ಐಪಿಎಸ್ ಅಧಿಕಾರಿಗಳು ತಮ್ಮ ಕೃತ್ಯಗಳ ಮೂಲಕ ರಾಜ್ಯಪಾಲರ ಕಚೇರಿಗೆ ಕಳಂಕ ತಂದಿದ್ದಾರೆ ಮಾತ್ರವಲ್ಲದೆ ಸಾರ್ವಜನಿಕ ಸೇವಕರಿಗೆ ಸಂಪೂರ್ಣವಾಗಿ ಹೊಂದಿಕೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು ನೀತಿ ನಿಯಮಗಳನ್ನು ನಿರ್ಲಕ್ಷ್ಯಿಸಿದ್ದಾರೆ” ಎಂದು ರಾಜ್ಯಪಾಲರು ತಮ್ಮ ವರದಿಯಲ್ಲಿ ಹೇಳಿದ್ದಾರೆ.