ಶ್ರೀನಗರ
ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದಾಳಿ ನಡೆಸಿದ ಶಂಕಿತ ಉಗ್ರರ ರೇಖಾಚಿತ್ರಗಳನ್ನು ಜಮ್ಮು ಕಾಶ್ಮೀರ ಪೊಲೀಸರು ಹಂಚಿಕೊಂಡಿದ್ದು, ಅವರ ಬಗ್ಗೆ ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
ಸಾರ್ವಜನಿಕರಿಗೆ ಮನವಿ ಮಾಡಿರುವ ಪೊಲೀಸರು, ಮಾಹಿತಿದಾರರ, ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಯಾವುದೇ ಸಂಬಂಧಿತ ಮಾಹಿತಿಯನ್ನು ಹೊಂದಿರುವ ನಾಗರಿಕರು ಅನಂತ್‌ನಾಗ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ನಿಯಂತ್ರಣ ಕೊಠಡಿ (PCR) ಅವರನ್ನು ನೇರವಾಗಿ ಈ ಕೆಳಗಿನ ಸಂಪರ್ಕ ಸಂಖ್ಯೆಗಳಲ್ಲಿ ಸಂಪರ್ಕಿಸಲು ಕೋರಲಾಗಿದೆ:
ಎಸ್ಎಸ್ಪಿ ಅನಂತನಾಗ್ : 9596777666, ಪಿಸಿಆರ್ ಅನಂತನಾಗ್ : 9596777669 ಇ- ಮೇಲ್ : dpoanantnag-jk@nic.in ಮಾಹಿತಿ ನೀಡಬಹುದು. ಕಾಶ್ಮೀರ ಕಣಿವೆಯಲ್ಲಿ ಸಾರ್ವಜನಿಕರ ಸುರಕ್ಷತೆಗೆ ಯಾವುದೇ ಅಡಚಣೆ ಉಂಟಾಗದಂತೆ ತಡೆಯಲು ಕಾನೂನು ಜಾರಿ ಸಂಸ್ಥೆಗಳು ಪ್ರಯತ್ನಗಳನ್ನು ತೀವ್ರಗೊಳಿಸಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಸಂಘಟನೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್ಎಫ್) ಹೊತ್ತುಕೊಂಡಿದೆ. ಈ ದಾಳಿಯ ಮಾಸ್ಟರ್ ಮೈಂಡ್ ಭಯೋತ್ಪಾದಕ ಸೈಫುಲ್ಲಾ ಖಾಲಿದ್. ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಮತ್ತು ಟಿಆರ್‌ಎಫ್‌ನ ಭಯೋತ್ಪಾದಕ ಚಟುವಟಿಕೆಗಳ ಪ್ರಮುಖ ನಿರ್ವಾಹಕ ಸೈಫುಲ್ಲಾ.
ಸೈಫುಲ್ಲಾ ಖಾಲಿದ್ನನ್ನು ಸೈಫುಲ್ಲಾ ಕಸೂರಿ ಎಂದೂ ಕರೆಯುತ್ತಾರೆ. ಆತ ಲಷ್ಕರ್ ಎ ತೊಯ್ಬಾ ಉಪ ಮುಖ್ಯಸ್ಥನಾಗಿದ್ದಾನೆ, ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್ ಸಯೀದ್ಗೆ ಆಪ್ತ ಎಂದು ಪರಿಗಣಿಸಲಾಗಿದೆ. ಸೈಫುಲ್ಲಾಗೆ ಐಷಾರಾಮಿ ಕಾರುಗಳೆಂದರೆ ಇಷ್ಟ, ಆತನಿಗೆ ಭಾರತದ ಪ್ರಧಾನಿಗಿಂತ ಹೆಚ್ಚಿನ ಭದ್ರತೆ ಇದೆಯಂತೆ.
ಸೈಫುಲ್ಲಾ ಖಾಲಿದ್ ಪಾಕಿಸ್ತಾನದಲ್ಲಿ ಎಷ್ಟು ಪ್ರಭಾವ ಹೊಂದಿದ್ದಾನೆಂದರೆ ಪಾಕಿಸ್ತಾನಿ ಸೇನಾ ಅಧಿಕಾರಿಗಳು ಆತನ ಮೇಲೆ ಹೂಮಳೆ ಸುರಿಸಿ ಬರಮಾಡಿಕೊಳ್ಳುತ್ತಾರೆ. ಆತ ಪಾಕಿಸ್ತಾನದಲ್ಲಿ ವಿಐಪಿಯಂತೆ ಓಡಾಡುತ್ತಾನೆ. ಸೈಫುಲ್ಲಾ ಎರಡು ತಿಂಗಳ ಹಿಂದೆ ಪಾಕಿಸ್ತಾನ ಆಕ್ರಮಿತ ಪಂಜಾಬ್ನ ಕಂಗನ್ಪುರ ಪ್ರದೇಶಕ್ಕೆ ಬಂದಿದ್ದ, ಅಲ್ಲಿ ಒಂದು ಕಾರ್ಯಕ್ರಮವನ್ನು ಪಾಕಿಸ್ತಾನಿ ಸೇನೆಯ ಕರ್ನಲ್ ಜಾಹಿದ್ ಜರೀನ್ ಖಟ್ಟಕ್ ಆಯೋಜಿಸಿದ್ದರು.
ಅಲ್ಲಿ ಖಾಲಿದ್ ಭಾರತೀಯ ಸೇನೆ ಮತ್ತು ಭಾರತದ ಜನರ ವಿರುದ್ಧ ಉಗ್ರ ಭಾಷಣ ಮಾಡಿದ್ದ. ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಸಭೆಯಲ್ಲಿ ಸೈಫುಲ್ಲಾ ವಿಷ ಕಾರಿದ್ದ. ಆತ ಭಾಷಣದಲ್ಲಿ 2026ರ ಫೆಬ್ರವರಿ ಹೊತ್ತಿಗೆ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ತನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದ. ನಮ್ಮ ಮುಜಾಹಿದ್ದೀನ್‌ಗಳು ಮುಂದಿನ ದಿನಗಳಲ್ಲಿ ದಾಳಿಯನ್ನು ತೀವ್ರಗೊಳಿಸುತ್ತವೆ.ಫೆಬ್ರವರಿ 2, 2026 ರ ವೇಳೆಗೆ ಕಾಶ್ಮೀರ ಸ್ವತಂತ್ರವಾಗುವ ಭರವಸೆ ಇದೆ ಎಂದಿದ್ದ.
