ಶಿಮ್ಲಾ :
ಶಿಮ್ಲಾದಲ್ಲಿ ಕೂಡ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. 20 ಮಂದಿ ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ಇಲ್ಲಿ ಶಿಮ್ಲಾದಿಂದ 100 ಕಿಮೀ ದೂರದಲ್ಲಿರುವ ರಾಂಪುರದ ಜಕ್ರಿಯಲ್ಲಿ ಮೇಘಸ್ಫೋಟ ಉಂಟಾಗಿದೆ.
ಸದ್ಯ ಶಿಮ್ಲಾ ಡಿಸಿ ಅನುಪಮ್ ಕಶ್ಯಪ್ ಮತ್ತು ಎಸ್ಪಿ ಶಿಮ್ಲಾ ಸಂಜೀವ್ ಗಾಂಧಿ ಸ್ಥಳಕ್ಕೆ ತೆರಳಿದ್ದಾರೆ. ಇಲ್ಲಿ ಒಟ್ಟು 20 ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಎನ್ಡಿಆರ್ಎಫ್ ತಂಡಗಳನ್ನೂ ಸ್ಥಳಕ್ಕೆ ಕಳುಹಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಎನ್ಡಿಎಸ್ಆರ್ಎಫ್ ತಂಡ, ಪೊಲೀಸರು ಮತ್ತು ರಕ್ಷಣಾ ತಂಡ ಘಟನಾ ಸ್ಥಳಕ್ಕೆ ತೆರಳಿದೆ ಎಂದು ಡಿಸಿ ಅನುಪಮ್ ಕಶ್ಯಪ್ ತಿಳಿಸಿದ್ದಾರೆ.
ನಮಗೆ ಬಂದಿರುವ ಮಾಹಿತಿಯ ಪ್ರಕಾರ ಮೇಘ ಸಿಡಿತದಿಂದ 20 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು. ಎಸ್ಡಿಎಂ ರಾಂಪುರ ನಿಶಾಂತ್ ತೋಮರ್ ಘಟನಾ ಸ್ಥಳಕ್ಕೆ ತಲುಪುತ್ತಿದ್ದಾರೆ. ಹಲವೆಡೆ ರಸ್ತೆ ಮುಚ್ಚಿದ ಕಾರಣ ರಕ್ಷಣಾ ತಂಡವು ಎರಡು ಕಿಲೋಮೀಟರ್ ದೂರದವರೆಗೆ ಉಪಕರಣಗಳೊಂದಿಗೆ ಘಟನಾ ಸ್ಥಳಕ್ಕೆ ತೆರಳಬೇಕಾಯಿತು ಎಂದು ತಿಳಿಸಿದ್ದಾರೆ.
ರುದ್ರಪ್ರಯಾಗದಲ್ಲಿ ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಭೀಮಾಲಿಯ ಕೇದಾರನಾಥ ಕಾಲುದಾರಿ ಮತ್ತು ಎರಡು ಸೇತುವೆಗಳು ಕೊಚ್ಚಿಹೋಗಿವೆ. ಭೀಮಾಲಿಯಲ್ಲಿ ಸಿಲುಕಿರುವ 200 ಮಂದಿಯನ್ನು ಹೊರತರುವ ಕಾರ್ಯ ನಡೆಯುತ್ತಿದೆ.
ಇನ್ನು ಕೇರಳದಲ್ಲೂ ಗುಡ್ಡಗಳು ಕುಸಿದು 170ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. ಕರ್ನಾಟಕ ಹಾಗೂ ದೆಹಲಿಯಲ್ಲೂ ಕೂಡ ವರುಣನ ಆರ್ಭಟ ಜೋರಾಗಿ ಹಲವೆಡೆ ಭಾರಿ ಅನಾಹುಗಳನ್ನೇ ಸೃಷ್ಟಿ ಮಾಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ








