2018 ರಿಂದ ಬ್ಯಾಂಕ್‌ ಗಳು ಸಂಗ್ರಹಿಸಿದ ದಂಡ ಎಷ್ಟು ಗೊತ್ತೆ….?

ನವದೆಹಲಿ: 

   ಸಂಸದೆ ಅಮೀ ಯಾಗ್ನಿಕ್ ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್‌ ಕರಾಡ್‌ ಅವರು ರಾಜ್ಯಸಭೆಯಲ್ಲಿ ಈ ಮಾಹಿತಿ ನೀಡಿದ್ದು, ಬ್ಯಾಂಕ್‌ ಖಾತೆಯಲ್ಲಿ ಕನಿಷ್ಠ ಮೊತ್ತ ಉಳಿಸಿಕೊಳ್ಳದೇ ಇರುವುದಕ್ಕೆ ದಂಡ, ಮಿತಿಗಿಂತ ಹೆಚ್ಚಿನ ಬಾರಿ ಎಟಿಎಂ ಬಳಕೆಗೆ ಶುಲ್ಕ ಹಾಗೂ ಎಸ್‌ಎಂಎಸ್‌ ಸೇವೆಗೆ ಶುಲ್ಕದ ಮೂಲಕ ವಾಣಿಜ್ಯ ಬ್ಯಾಂಕ್‌ಗಳು 2018ರಿಂದ ಈಚೆಗೆ ಗ್ರಾಹಕರಿಂದ ಒಟ್ಟು 35,587.68 ಕೋಟಿ ಸಂಗ್ರಹಿಸಿವೆ ಎಂದು ಹೇಳಿದ್ದಾರೆ.

   2018ರಿಂದ ಈಚೆಗೆ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದ್ದಕ್ಕೆ ದಂಡವಾಗಿ 21,044.04 ರೂ ಸಂಗ್ರಹವಾಗಿದ್ದು, ಉಚಿತ ಮಿತಿಗಿಂತ ಹೆಚ್ಚು ಬಾರಿ ಎಟಿಎಂ ಬಳಕೆ ಮೇಲೆ ಹೇರಲಾದ ದಂಡ ಸಂಗ್ರಹ 8,289.32ರೂ ಮತ್ತು ಎಸ್‌ಎಂಎಸ್‌ ಸೇವೆಗಳಿಗೆ 6,254.32 ರೂ ಶುಲ್ಕ ಹೇರಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹಾಗೂ ಖಾಸಗಿ ವಲಯದ ಎಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಐಡಿಬಿಐ ಬ್ಯಾಂಕ್‌ ನೀಡಿರುವ ಅಂಕಿ–ಅಂಶಗಳನ್ನು ಆಧರಿಸಿ ಈ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

   ಆರ್‌ಬಿಐ 2015ರ ಜುಲೈ 1ರಂದು ಹೊರಡಿಸಿರುವ ಪ್ರಕಟಣೆಯಂತೆ, ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಉಳಿಸಿಕೊಳ್ಳದವರಿಗೆ ಬ್ಯಾಂಕ್‌ನ ಆಡಳಿತ ಮಂಡಳಿ ಒಪ್ಪಿರುವ ನೀತಿಯಂತೆ ದಂಡ ವಿಧಿಸಲು ಬ್ಯಾಂಕ್‌ಗಳಿಗೆ ಅವಕಾಶ ಇದೆ. ಆದರೆ, ಹೀಗೆ ವಿಧಿಸುವ ದಂಡವು ನ್ಯಾಯೋಚಿತವಾಗಿ ಇರಬೇಕು ಮತ್ತು ಸೇವೆಗಳನ್ನು ನೀಡುವುದಕ್ಕೆ ತಗಲುವ ಸರಾಸರಿ ವೆಚ್ಚಕ್ಕಿಂತಲೂ ಹೆಚ್ಚಿಗೆ ಇರದಂತೆ ನೋಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.

   2021ರ ಜೂನ್‌ 10ರ ಆರ್‌ಬಿಐ ಅಧಿಸೂಚನೆಯ ಪ್ರಕಾರ, ಗ್ರಾಹಕರು ತಾವು ಖಾತೆ ಹೊಂದಿರುವ ಬ್ಯಾಂಕಿನ ಎಟಿಎಂ ಮೂಲಕ ಪ್ರತಿ ತಿಂಗಳು ಐದು ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. ಬೇರೆ ಬ್ಯಾಂಕ್‌ ಎಟಿಎಂ ಮೂಲಕ ನಗರ ಪ್ರದೇಶದಲ್ಲಿ ತಿಂಗಳಿಗೆ ಮೂರು ಬಾರಿ, ಗ್ರಾಮೀಣ ಭಾಗದಲ್ಲಿ ತಿಂಗಳಿಗೆ ಐದು ಬಾರಿ ಮಾತ್ರ ಶುಲ್ಕ ರಹಿತವಾಗಿ ವಹಿವಾಟು ನಡೆಸುವ ಮಿತಿ ವಿಧಿಸಲಾಗಿದೆ. ಈ ಮಿತಿ ಮೀರಿದರೆ ಪ್ರತಿ ವಹಿವಾಟಿಗೆ ಗರಿಷ್ಠ 21 ಶುಲ್ಕ ವಿಧಿಸುವುದು 2022ರ ಜನವರಿ1ರಿಂದ ಜಾರಿಗೆ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap