ನವದೆಹಲಿ:
ಭಾರತ ತಂಡ ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದರೆ, ಪಾಕಿಸ್ತಾನ ತಂಡ 2026ರಲ್ಲಿ ಭಾರತದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.
2025ರ ಫೆಬ್ರವರಿ-ಮಾರ್ಚ್ನಲ್ಲಿ ನಿಗದಿಯಾಗಿರುವ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದೆ, ಅದರ ಪಂದ್ಯಗಳನ್ನು ದುಬೈ ಅಥವಾ ಶ್ರೀಲಂಕಾದಲ್ಲಿ ಆಯೋಜಿಸಬೇಕೆಂದು ಬಿಸಿಸಿಐ ಬೇಡಿಕೆ ಸಲ್ಲಿಸಿದೆ ಎಂದು ಈ ಮುನ್ನ ವರದಿಯಾಗಿತ್ತು. ಇದಕ್ಕೆ ಪ್ರತಿಯಾಗಿ ಪಿಸಿಬಿ, 2026ರಲ್ಲಿ ಭಾರತ&ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಹಿಷ್ಕರಿಸುವ ಬೆದರಿಕೆ ಹಾಕಿದೆ ಎನ್ನಲಾಗಿದೆ.
ಜುಲೈ 19ರಿಂದ 22ರವರೆಗೆ ಕೊಲಂಬೊದಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಗಳು ನಡೆಯಲಿದ್ದು, ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಪ್ರಸ್ತಾಪವನ್ನು ಪಿಸಿಬಿ ತಿರಸ್ಕರಿಸುವ ಸಾಧ್ಯತೆಗಳಿವೆ. ಕಳೆದ ವರ್ಷ ಪಾಕ್ ಆತಿಥ್ಯದಲ್ಲಿ ನಡೆದ ಏಷ್ಯಾಕಪ್ಗೆ ಭಾರತ ತೆರಳಿರಲಿಲ್ಲ.
ಬದಲಾಗಿ ಹೈಬ್ರಿಡ್ ಮಾದರಿಯ ಅನ್ವಯ ಭಾರತ ತಂಡ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು ಮತ್ತು ಭಾರತವನ್ನು ಒಳಗೊಂಡ ಫೈನಲ್ ಕೂಡ ಲಂಕಾದಲ್ಲೇ ಆಯೋಜನೆಗೊಂಡಿತ್ತು. ಈ ಸಲವೂ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇಲ್ಲ. ಭಾರತ ಕ್ರಿಕೆಟ್ ತಂಡ 2008ರಲ್ಲಿ ಕೊನೆಯದಾಗಿ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ಪಾಕಿಸ್ತಾನ 1996ರ ಬಳಿಕ ಮೊದಲ ಬಾರಿಗೆ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸುವ ಸಿದ್ಧತೆಯಲ್ಲಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ