ತುಮಕೂರು:
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯಲು ಸರಕಾರ ಸುಗ್ರೀವಾಜ್ಞೆ ಜಾರಿ ಮಾಡಿದರೂ ಅದಕ್ಕೆ ಕಡಿವಾಣ ಬಿದ್ದಿಲ್ಲ. ಇದೀಗ ಗೃಹ ಸಚಿವರ ಕ್ಷೇತ್ರದಲ್ಲಿ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ತುಮಕೂರಿನಲ್ಲಿ ಒಬ್ಬ ಆಟೋ ಚಾಲಕ ಹಾಗೂ ಓರ್ವ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಸುಗ್ರೀವಾಜ್ಞೆ ಜಾರಿ ಬಳಿಕವೂ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ನಿಂತಿಲ್ಲ. ಗೃಹ ಸಚಿವರ ತವರಾದ ತುಮಕೂರಿನಲ್ಲಿಯೂ ಇದರಿಂದಾಗಿ ಒಂದೇ ದಿನ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಲ್ಲಿ ಒಬ್ಬರು ಅಂಜನಮೂರ್ತಿ (35). ಅಂಜನಮೂರ್ತಿ ಬಟವಾಡಿಯ ಮಹಾಲಕ್ಷ್ಮೀ ನಗರದ ನಿವಾಸಿ. ಫೈನಾನ್ಸ್ ಕಿರುಕುಳದ ಕುರಿತು ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಹಣ ನೀಡುವಂತೆ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ವಿಡಿಯೋದಲ್ಲಿ ಮನವಿ ಮಾಡಿದ್ದಾನೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕುತ್ತಿಪುರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದುಕೊಂಡು ಅಜೀಜ್ ಉನಿಸಾ ಎಂಬವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಅಜೀಜಾ ಅವರು 12 ಲಕ್ಷ ರೂಪಾಯಿ ಸಾಲವನ್ನು ಬೇರೆ ಬೇರೆ ಫೈನಾನ್ಸ್‌ಗಳಿಂದ ತೆಗೆದಿದ್ದರು. ಆಶೀರ್ವಾದ, ಸೂರ್ಯೋದಯ ಬಜಾಜ್ ಸೇರಿದಂತೆ ವಿವಿಧ ಫೈನಾನ್ಸ್‌ಗಳಿಂದ ಉನ್ನಿಸಾ ಸಾಲವನ್ನು ಪಡೆದಿದ್ದರು. ಕಳೆದ ಕೆಲವು ತಿಂಗಳಿಂದ ಸಾಲ ಮರುಪಾವತಿ ಮಾಡಿರಲಿಲ್ಲ. ಮನೆಗೆ ಬಂದು ಹಣ ಕಟ್ಟುವಂತೆ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಹಾಗಾಗಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.