ಕಣ್ಣೂರು:
ಇತ್ತೀಚಿನ ದಿನಗಳಲ್ಲಿ ಸಾವು-ನೋವು ಏನೇ ಇದ್ದರೂ ಪಟಾಕಿ ಸಿಡಿಸುವುದು ವಾಡಿಕೆಯಾಗಿ ಪರಿಣಮಿಸಿದೆ. ಮದುವೆ ಮತ್ತಿತರ ಕಾರ್ಯಕ್ರಮಗಳ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸುವುದು ಕೆಲವರಿಗೆ ಅಭ್ಯಾಸ. ಕಣ್ಣೂರಿನ ತ್ರಿಪ್ಪಂಗೊಟ್ಟೂರಿನಲ್ಲಿ ಮದುವೆ ಸಮಾರಂಭದಲ್ಲಿ ಭಾರಿ ಪ್ರಮಾಣದ ಪಟಾಕಿಗಳನ್ನು ಸಿಡಿಸಿದ್ದರಿಂದ 22 ದಿನದ ಹೆಣ್ಣು ಮಗುವಿನ ಜೀವಕ್ಕೇ ಕುತ್ತು ತಂದಿದೆ.
ಕೆವಿ ಅಶ್ರಫ್ ಮತ್ತು ರಿಹ್ವಾನಾ ದಂಪತಿಗೆ ಜನಿಸಿದ ಶಿಶು ಗಂಭೀರ ಸಮಸ್ಯೆಗಳಿಂದಾಗಿ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಐದು ದಿನಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದೆ.
ಪೋಷಕರ ಪ್ರಕಾರ, ಭಾನುವಾರ ತಡರಾತ್ರಿ ಪಟಾಕಿಗಳ ಜೋರಾಗಿದ್ದ ಶಬ್ದವು ಮೊದಲು ಮಗುವನ್ನು ಗಾಬರಿಗೊಳಿಸಿದೆ. ಈ ಶಬ್ಧದಿಂದಾಗಿ ನಂತರ ಮಗು ಪ್ರತಿಕ್ರಿಯಿಸುವುದನ್ನೇ ಬಿಟ್ಟಿದೆ. ಇದರಿಂದ ಗಾಬರಿಗೊಂಡ ತಾಯಿ ರಿಹ್ವಾನಾ ತನ್ನ ನವಜಾತ ಶಿಶು ಸತ್ತಿದೆ ಎಂದು ಭಾವಿಸಿದ್ದಾರೆ. ಅನಿವಾಸಿ ಅಶ್ರಫ್ ಈ ಆಘಾತಕಾರಿ ಅನುಭವವನ್ನು ಮೆಲುಕು ಹಾಕಿದ್ದಾರೆ.
‘ಭಾನುವಾರ ರಾತ್ರಿ ನಡೆದ ಮೊದಲ ದೊಡ್ಡ ಸ್ಫೋಟದ ಸದ್ದು ಮಗುವನ್ನು ದಿಗ್ಭ್ರಮೆಗೊಳಿಸಿತು. ಆದಾದ ಸ್ವಲ್ಪ ಸಮಯದ ನಂತರ ಮಗು ಚೇತರಿಸಿಕೊಂಡಿತು. ನನ್ನ ಪತ್ನಿಯ ಕುಟುಂಬಸ್ಥರು ಪಟಾಕಿ ಸಿಡಿಸುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರೂ, ಮದುವೆ ಮನೆಯಲ್ಲಿದ್ದವರು ಪಟಾಕಿ ಸಿಡಿಸುವುದನ್ನು ಮುಂದುವರಿಸಿದ್ದರು’ ಎಂದು ಹೇಳಿದರು.
ಪಟಾಕಿ ಸಿಡಿಸಿದ ದೊಡ್ಡ ಶಬ್ಧದಿಂದಾಗಿ ನನ್ನ ಮಗು 10 ನಿಮಿಷಗಳ ಕಾಲ ಬಾಯಿ ಮತ್ತು ಕಣ್ಣುಗಳನ್ನು ತೆರೆದು ಹಾಗೆಯೇ ಮಲಗಿಕೊಂಡಿತ್ತು. ನಂತರ ಮಗು ಚಲನೆಯನ್ನೇ ಕಳೆದುಕೊಂಡಿತು. ನನ್ನ ಹೆಂಡತಿ ಮಗುವಿನ ಪಾದಗಳನ್ನು ತಟ್ಟಲು ಪ್ರಯತ್ನಿಸಿದ ನಂತರ, ಮಗು ಜೋರಾಗಿ ಅಳಲು ಶುರುಮಾಡಿತು. ಆ ರಾತ್ರಿಯ ನಂತರ, ಮತ್ತೊಂದು ದೊಡ್ಡ ಪಟಾಕಿ ಶಬ್ಧವು ಮಗುವನ್ನು ಅಪಾಯಕಾರಿ ಸ್ಥಿತಿಗೆ ತಳ್ಳಿತು ಮತ್ತು ನಾವು ಕೂಡಲೇ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಅಶ್ರಫ್ ಹೇಳಿದರು.
ಗುರುವಾರ ಸಂಜೆ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ, ಆರೋಗ್ಯದ ಮೇಲೆ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಕುಟುಂಬವು ಚಿಂತಿತವಾಗಿದೆ. ಈ ಸಂಬಂಧ ಅವರು ಬುಧವಾರ ಕೊಳವಳ್ಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
