ನವದೆಹಲಿ:
ಗಡ್ಡಕ್ಕೆ ಬಣ್ಣಹಚ್ಚಿ ಮುದುಕನ ವೇಷ ಧರಿಸಿ ನಕಲಿ ಪಾಸ್ ಪೋರ್ಟ್ ನಲ್ಲಿ ಪ್ರಯಾಣಿಸಲು ಯತ್ನಿಸುತ್ತಿದ್ದ ಯುವಕೊಬ್ಬನನ್ನು ಸಿಐಎಸ್ಎಫ್ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ನಕಲಿ ಪಾಸ್‌ಪೋರ್ಟ್ ಪ್ರಕರಣದಡಿಯಲ್ಲಿ ಯುವಕನೊಬ್ಬನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಕೆನಡಾಕ್ಕೆ ಪ್ರಯಾಣಿಸುತ್ತಿದ್ದ ಯುವಕನನ್ನು ಸಿಐಎಸ್ ಎಫ್ ತಂಡ ಆತನ ಅನುಮಾನಾಸ್ಪದ ನಡೆಯ ಹಿನ್ನೆಲೆ ವಿಚಾರಣೆ ನಡೆಸಿ ಬಂಧಿಸಿದೆ. ಬಂಧಿತನನ್ನು 24 ವರ್ಷದ ಗುರುಸೇವಕ್ ಸಿಂಗ್ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಪ್ರಯಾಣಿಕ ಗುರು ಸೇವಕ್ ಸಿಂಗ್(24) ಗಡ್ಡ ಮತ್ತು ಕೂದಲಿಗೆ ಬಣ್ಣ ಹಚ್ಚಿ 67 ವರ್ಷದ ವ್ಯಕ್ತಿಯ ವೇಷ ಧರಿಸಿ ರಶ್ಮಿಂದರ್ ಸಿಂಗ್ ಸಹೋಟಾ ಎಂಬ ಹೆಸರಿನ ಪಾಸ್ ಪೋರ್ಟ್ ತೋರಿಸಿ ಮಂಗಳವಾರ ದೆಹಲಿಯಿಂದ ಹೊರಡುವ ಏರ್ ಕೆನಡಾ ವಿಮಾನ ಹತ್ತಿ ಕೆನಡಕ್ಕೆ ಪ್ರಯಾಣಿಸುವ ಪ್ಲ್ಯಾನ್ ಮಾಡಿದ್ದನು. ಆದರೆ ಅವನ ಚಟುವಟಿಕೆಗಳು ಮತ್ತು ನಡೆ ಅನುಮಾನಾಸ್ಪದವೆಂದು ಕಂಡು ಬಂದ ಹಿನ್ನಲೆಯಲ್ಲಿ ಆತನನ್ನು ಮೊದಲು ಸಿಐಎಸ್ ಎಫ್ ಸಿಬ್ಬಂದಿ ಪರಿಶೀಲಿಸಿದರು.
ವ್ಯಕ್ತಿಯ ನೋಟ, ಧ್ವನಿ ಮತ್ತು ಚರ್ಮದ ವಿನ್ಯಾಸವು ಪಾಸ್ ಪೋರ್ಟ್ ನಲ್ಲಿ ತಿಳಿಸಿದ ವಿವರಗಳಿಗೆ ಭಿನ್ನವಾಗಿತ್ತು. ಸೂಕ್ಷ್ಮವಾಗಿ ನೋಡಿದರೆ ಆತನ ಗಡ್ಡ ಮತ್ತು ಕೂದಲಿಗೆ ಬಣ್ಣಹಚ್ಚಿದ್ದು, ವಯಸ್ಸಾದವರಂತೆ ಕಾಣಲು ಕನ್ನಡಕ ಧರಿಸಿದ್ದನು ಎಂಬುದನ್ನು ಅವರು ಗಮನಿಸಿದರು.
ಕೂಡಲೇ ಆತನನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆಗೊಳಪಡಿಸಿದಾಗ ಆತ ಸತ್ಯಾಂಶ ಬಾಯ್ಬಿಟ್ಟಿದ್ದಾನೆ. ಹಾಗೆಯೇ ಆತನನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಆತನ ನಿಜವಾದ ಹೆಸರಿನ ಪಾಸ್ ಪೋರ್ಟ್ ಅವನ ಮೊಬೈಲ್ ನಲ್ಲಿತ್ತು ಎನ್ನಲಾಗಿದೆ. ಹಾಗಾಗಿ ಈ ಪ್ರಕರಣವು ನಕಲಿ ಪಾಸ್ ಪೋರ್ಟ್ ಗೆ ಸಂಬಂಧಿಸಿದ್ದಾದ್ದರಿಂದ ಸಿಐಎಸ್ ಎಫ್ ಆತನನ್ನು ಬಂಧಿಸಿ ಕಾನೂನಿನ ಕ್ರಮದಂತೆ ಆತನನ್ನು ಹಾಗೂ ಆತನ ವಸ್ತುಗಳೊಂದಿಗೆ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.