ತೆಲಂಗಾಣ :
ಅಲ್ಲು ಅರ್ಜುನ ಅಭಿನಯದ ‘ಪುಷ್ಪ 2’ ಚಿತ್ರ ಗುರುವಾರ (ಡಿಸೆಂಬರ್ 5) ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ಸಿನಿಮಾ ರಿಲೀಸ್ಗೂ ಹಿಂದಿನ ದಿನ ಎಲ್ಲ ಕಡೆಗಳಲ್ಲಿ ಪ್ರೀಮಿಯರ್ ಶೋ ಇಡಲಾಗಿತ್ತು. ಹೈದರಾಬಾದ್ನ ಐಕಾನಿಕ್ ಥಿಯೇಟರ್ಗಳಲ್ಲಿ ಒಂದಾದ ‘ಸಂಧ್ಯಾ’ದಲ್ಲೂ ಈ ಸಿನಿಮಾ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ವೀಕ್ಷಣೆಗೆ ಅಲ್ಲು ಅರ್ಜುನ್ ಕೂಡ ಬರಲಿದ್ದಾರೆ ಎಂದು ತಿಳಿಯುತ್ತಿದ್ದಂತೆ ಥಿಯೇಟರ್ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಈ ವೇಳೆ ಅವಘಡ ಸಂಭವಿಸಿತ್ತು.
‘ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಘಟನೆ ಕೇಳಿ ಆಘಾತವಾಯಿತು. ಇಬ್ಬರ ಮಕ್ಕಳ ತಾಯಿ ರೇವತಿ ನಿಧನ ಹೊಂದಿದ ವಿಚಾರ ತಿಳಿಯಿತು. ಆ ಕಾರಣದಿಂದಲೇ ಪುಷ್ಪ 2 ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಜನ ಥಿಯೇಟರ್ಗೆ ಬಂದು ಸಿನಿಮಾ ನೋಡಿ ಎಂಜಾಯ್ ಮಾಡಬೇಕೆಂಬ ಆಶಯದಿಂದ ಸಿನಿಮಾ ಮಾಡುತ್ತೇವೆ. ಥಿಯೇಟರ್‌ನಲ್ಲಿ ಈ ರೀತಿ ಘಟನೆ ನಡೆದಾಗ ಬೇಸರ ಆಗುತ್ತದೆ’ ಎಂದಿದ್ದಾರೆ ಅಲ್ಲು ಅರ್ಜುನ್.
‘ನಾವು ಏನೇ ಮಾಡಿದರೇ ಈ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ನಿಮಗಾಗಿ ನಾವು ಇದ್ದೇವೆ. ರೇವತಿ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ನನ್ನ ಪರವಾಗಿ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೀಡುತ್ತಿದ್ದೇವೆ. ವೈದ್ಯಕೀಯ ಖರ್ಚನ್ನು ನಾವೇ ನೀಡುತ್ತೇವೆ. ನಮ್ಮ ತಂಡದಿಂದ ಯಾವುದೇ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ. ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಶೀಘ್ರದಲ್ಲೇ ರೇವತಿ ಕುಟುಂಬವನ್ನು ಖುದ್ದಾಗಿ ಭೇಟಿ ಮಾಡುತ್ತೇವೆ’ ಎಂದು ಬನ್ನಿ ಹೇಳಿದ್ದಾರೆ.