ಚಿಕ್ಕಮಗಳೂರು
ವೀರಶೈವ ಪಂಚಪೀಠಗಳಲ್ಲೇ ಮೊದಲನೇಯದಾದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಆವರಣದಲ್ಲಿ ರೇಣುಕಾಚಾರ್ಯರ ಏಕಶಿಲಾ ಮೂರ್ತಿ ನಿರ್ಮಾಣವಾಗುತ್ತಿದ್ದು, ಇದಕ್ಕೆ 250 ಟನ್ ತೂಕದ ಬೃಹತ್ ಕಲ್ಲು ಬಂದಿದೆ .
ತುಮಕೂರು ಜಿಲ್ಲೆಯ ಮಡಕಶಿರಾ ಕ್ವಾರಿಯಿಂದ 250 ಟನ್ ತೂಕದ ಬೃಹತ್ ಶಿಲೆ ರಂಭಾಪುರಿ ಮಠದ ಆವರಣಕ್ಕೆ ಆಗಮಿಸಿದೆ. ರಂಭಾಪುರಿ ಮಠದ ಡಾ.ವೀರ ಸೋಮೇಶ್ವರ ಜಗದ್ಗುರುಗಳ ಆಶಯದಂತೆ ರಂಭಾಪುರಿ ಮಠದ ಆವರಣದಲ್ಲಿ 51 ಅಡಿ ಎತ್ತರದ ಬೃಹತ್ ಏಕಶಿಲಾ ಮೂರ್ತಿ ತಯಾರಾಗುತ್ತಿದೆ. ಈಗಾಗಲೇ ಮೂರ್ತಿ ನಿರ್ಮಾಣಕ್ಕೆ 100 ಹಾಗೂ 150 ಟನ್ ತೂಕದ ಪಾಣಿಪೀಠದ ಎರಡು ಬೃಹತ್ ಶಿಲೆಗಳನ್ನು ಮಠದ ಆವರಣಕ್ಕೆ ತರಲಾಗಿದೆ.
ಈಗಾಗಲೇ ಶಿಲೆಗಳ ನಿರ್ಮಾಣ ಕಾರ್ಯ ಕೂಡ ಆರಂಭ ಆಗಿದೆ. ಈ ಭಾರೀ ತೂಕದ ಬೃಹತ್ ಶಿಲೆ ನಿರ್ಮಾಣದ ಕಲ್ಲು ಸಾಗಾಣಿಕೆಯ ಜವಾಬ್ದಾರಿಯನ್ನ ಬೆಂಗಳೂರಿನ ಶ್ರೀಧರ್ ಬಾಬು ತಂಡ ಹೊತ್ತಿದೆ. 112 ಚಕ್ರದ ಉದ್ದವಾದ ಲಾರಿಯಲ್ಲಿ ಈ ಕಲ್ಲನ್ನು ರಂಭಾಪುರಿ ಮಠದ ಆವರಣಕ್ಕೆ ತರುವುದೇ ಶ್ರೀಧರ್‍ಬಾಬು ತಂಡಕ್ಕೆ ದೊಡ್ಡ ಸವಾಲಾಗಿತ್ತು. ಮೂರ್ತಿ ನಿರ್ಮಾಣಕ್ಕೆ ಅಗತ್ಯವಿರುವ 300 ಟನ್ ತೂಕದ 4ನೇ ಶಿಲೆಯೂ ಶೀಘ್ರದಲ್ಲೇ ಮಠದ ಆವರಣಕ್ಕೆ ಆಗಮಿಸಲಿದೆ.
51 ಅಡಿ ಎತ್ತರದ ರೇಣುಕಾಚಾರ್ಯ ಸುಂದರ ಮೂರ್ತಿಯ ಕೆತ್ತನೆಯ ಜವಾಬ್ದಾರಿಯನ್ನು ಬೆಂಗಳೂರಿನ ಅಶೋಶ್ ಗುಡಿಗಾರ, ಗೌತಮ ಗುಡಿಗಾರ ಹಾಗೂ ಸಹ ಕುಶಲಕರ್ಮಿಗಳು ಹೊತ್ತಿದ್ದಾರೆ. ಇನ್ನು ರಂಭಾಪುರಿ ಮಠದ ಆವರಣದಲ್ಲಿ ಮೂರ್ತಿ ಕೆತ್ತನೆಯ ಕಾರ್ಯ ನಡೆಯುತ್ತಿದ್ದು, ಪೀಠದ ಆವರಣದಲ್ಲಿ ಶೀಘ್ರವೇ 51 ಅಡಿಯ ರೇಣುಕಾಚಾರ್ಯ ಮೂರ್ತಿ ತಲೆ ಎತ್ತಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ