ಬೆಂಗಳೂರು :
ಅಪ್ರಾಪ್ತರ ಕೈಯಲ್ಲಿ ವಾಹನಗಳನ್ನು ಕೊಡಬಾರದೆಂದು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಪೋಷಕರು ಮಾತ್ರ ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ಮಕ್ಕಳ ಕೈಗೆ ಬೈಕ್, ಸ್ಕೂಟರ್ ಕೊಟ್ಟು ಕಳುಹಿಸುತ್ತಾರೆ. ಹೀಗೆಯೇ ಅಪ್ರಾಪ್ತಾ ಮಗನ ಕೈಗೆ ಬೈಕ್ ಕೊಟ್ಟು ತಂದೆ ಸಾವಿರಾರು ರೂಪಾಯಿ ದಂಡ ಕಟ್ಟಿದ್ದಾರೆ.
ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದ ತಂದೆಗೆ ರಾಣೆಬೆನ್ನೂರು ಜೆಎಂಎಫ್ಸಿ ನ್ಯಾಯಾಲಯ 27,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ರಾಣೇಬೆನ್ನೂರಿನ ದಿಳ್ಳೆಪ್ಪ ಕಾಟಿ ಎಂಬುವರು ಅಪ್ರಾಪ್ತ ಮಗನಿಗೆ ಬೈಕ್ ಓಡಿಸಲು ನೀಡಿದ್ದು, ಅಪಘಾತ ಸಂಭವಿಸಿತ್ತು. ರಾಣೇಬೆನ್ನೂರು ಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಶುಕ್ರವಾರ ಅಪ್ರಾಪ್ತ ಮಗನಿಗೆ ಬೈಕ್ ನೀಡಿದ್ದಕ್ಕೆ ತಂದೆಗೆ ದಂಡ ವಿಧಿಸಿದೆ. ಇದೇ ವೇಳೆ ಅಪ್ರಾಪ್ತ ಮಕ್ಕಗಳಿಗೆ ಬೈಕ್ ನೀಡದಂತೆ ಸಲಹೆ ನೀಡಿತು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವುದು ಅಪರಾಧವಾಗಿದೆ ಎಂದು ಸಂಚಾರ ಪೊಲೀಸ್ ಜಾಗೃತಿ ಮೂಡಿಸುತ್ತಿದೆ. ಈ ಕುರಿತಾಗಿ ಟ್ವೀಟ್ ಮಾಡಿ ಪೋಷಕರಲ್ಲಿ ಅರಿವು ಮೂಡಿಸುತ್ತಿದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಅಪ್ರಾಪ್ತರು ಎಂದು ಪರಿಗಣಿಸಲಾಗುತ್ತದೆ. ಅಪ್ರಾಪ್ತರು ವಾಹನ ಚಲಾಯಿಸಿದರೆ ದಂಡ, ಜೈಲು ಶಿಕ್ಷೆ, ಪೋಷಕರ ಡ್ರೈವಿಂಗ್ ಲೈಸೆನ್ಸ್ ರದ್ದು, ನ್ಯಾಯಾಲಯದ ವೆಚ್ಚ, ವಕೀಲರ ಶುಲ್ಕ, ವಿಮಾ ಹೆಚ್ಚಳ ಸೇರಿದಂತೆ ಇನ್ನೂ ಹಲವು ದಂಡ ಪಾವತಿಸಬೇಕಾಗುತ್ತದೆ. ಒಂದು ವೇಳೆ ಪೋಷಕರು ತಮ್ಮ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬೈಕ್ ಚಾಲನೆಗಾಗಿ ನೀಡಿದರೆ, ಅವರಿಗೆ 25 ಸಾವಿರ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆಯಾಗಬಹುದು.