ತಿಪಟೂರು
ಕೇರಳ ಮತ್ತು ಕೊಡಗಿನಲ್ಲಿ ಜನರು ನೀರಿನಲ್ಲಿ ಮುಳುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇದಕ್ಕೆ ತದ್ವಿರುದ್ದವಾದ ಸ್ಥಿತಿಯಲ್ಲಿ ಹೂಲಿಹಳ್ಳಿ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಬಳುವನೇರಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೂಲಿಹಳ್ಳಿ ಗ್ರಾಮದಲ್ಲಿ ಜನರು ನೀರಿಗಾಗಿ ಪರದಾಡುವಂತಾಗಿದ್ದು ಬಿಂದಿಗೆ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಹೋಗಬೇಕಾಗಿದ್ದು ಬೋರ್‍ವೆಲ್ ಮಾಲೀಕರು ಯಾವಾಗ ಮೋಟಾರ್ ಆರಂಭಿಸುತ್ತಾರೋ ಎಂದು ತೋಟ ಮತ್ತು ಹೊಲಗಳ ಹತ್ತಿರ ಜನರು ನೀರಿಗಾಗಿ ಜಾತಕ ಪಕ್ಷಿಯಂತೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಾಯುತ್ತಿದ್ದಾರೆ.
ಕುಡಿಯುವ ನೀರು ಎಂದು ಕೆಲವರು ಉಚಿತವಾಗಿ ನೀರು ನೀಡಿದರೆ ಕೆಲವರು ವಿದ್ಯುತ್ ಅಭಾವದ ದಿನಗಳಲ್ಲಿ ಎರಡು ಗಂಟೆ ವಿದ್ಯುತ್ ನೀಡುತ್ತಾರೆ. ಅದರಲ್ಲಿ ನಿಮಗೆ ನೀರು ಕೊಡುತ್ತಾ ಕೂತರೆ ನಮ್ಮ ತೋಟಕ್ಕೆ ನೀರು ಹಾಯಿಸುವುದು ಯಾವಾಗ ಎಂದು ನೀರು ಕೊಡಲು ನಿರಾಕರಿಸುತ್ತಾರೆ.
ಕುಡಿಯುವ ನೀರು ಬೇಕೆಂದರೆ ಹೂಲಿಹಳ್ಳಿಯಿಂದ ಮೂರು ಕಿಲೋಮೀಟರ್ ಇರುವ ಕಳ್ಳಿಕೊಪ್ಪಲು ಅಥವಾ ಆನಿವಾಳ ಗ್ರಾಮಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಇದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಲು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಶಾಸಕರಲ್ಲಿ ಮನವಿ ಮಾಡಿದರು. ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಶಾಶ್ವತ ಪರಿಹಾರ ದೊರೆತಿಲ್ಲ.
ತಾತ್ಕಾಲಿಕವಾಗಿ ವಾರಕೊಂದು ದಿನ ನೀರನ್ನು ನೀಡುವ ಅಧಿಕಾರಿಗಳು ಕುಡಿಯುವ ನೀರಿಗಾಗಿ ಒಂದು ಸಾವಿರ ಅಡಿ ಬೋರ್‍ವೆಲ್ ಕೊರೆಸಿದರೂ ಒಂದು ಇಂಚು ನೀರು ಬಿದ್ದಿದೆ. ಈ ಬೋರ್‍ವೆಲ್‍ಗೆ ಪಂಪು ಮೋಟಾರ್ ಅಳವಡಿಸದೆ ಮೀನಾಮೇಷ ಎಣಿಸುತ್ತಿದ್ದಾರೆ.
ನಾವು ಆಯ್ಕೆಮಾಡಿದ ಜನಪ್ರತಿನಿಧಿಗಳು ನಮ್ಮ ಗೋಳು ಕೇಳುತ್ತಿಲ್ಲ, ಕೂಡಲೇ ಹೂಲಿಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ