ತುಮಕೂರು :
ತುಮಕೂರು ಬೆಸ್ಕಾಂ ಜಾಗೃತ ದಳ ಪೊಲೀಸ್ ಠಾಣೆಯು ಪೊಲೀಸ್ ಅಧೀಕ್ಷಕ ಎಂ. ನಾರಾಯಣ್, ಡಿವೈಎಸ್‍ಪಿ ಭಾಸ್ಕರ್ ವಕ್ಕಲಿಗ, ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಅವರ ಮಾರ್ಗದರ್ಶನದಲ್ಲಿ 2018ರ ಜನವರಿಯಿಂದ ಈವರೆಗೆ ವಿದ್ಯುತ್ ಕಳ್ಳತನಕ್ಕೆ ಸಂಬಂಧಿಸಿದ 291 ಪ್ರಕರಣಗಳನ್ನು ದಾಖಲಿಸಿಕೊಂಡು 1,86,80,415 ರೂ.ಗಳ ದಂಡವನ್ನು ವಿಧಿಸಿದೆ. ಈ ಪೈಕಿ 20 ಪ್ರಕರಣಗಳು ನಿರಂತರ ಜ್ಯೋತಿ ಮಾರ್ಗದಿಂದ ಅನಧಿಕೃತವಾಗಿ ವಿದ್ಯುತ್ ಕಳ್ಳತನ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 191 ಪ್ರಕರಣಗಳಲ್ಲಿ ಆರೋಪಿತರು ದಂಡದ ಹಣ ಪಾವತಿಸಿದ್ದಾರೆ. ಇದರಿಂದ 52,42,160 ರೂ.ಗಳನ್ನು ವಸೂಲಿ ಮಾಡಲಾಗಿದೆ. ವಿದ್ಯುತ್ ಕಳ್ಳತನಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆಯಲ್ಲಿ ಈವರೆಗೆ ಒಟ್ಟು 16 ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪೊಲೀಸ್ ಉಪಾಧೀಕ್ಷಕ ವಿ.ವಿ.ಭಾಸ್ಕರ್ ಅವರು ಇತ್ತೀಚೆಗೆ ನಡೆಸಿದ ಠಾಣಾ ಪರಿವೀಕ್ಷಣೆ ಸಂದರ್ಭದಲ್ಲಿ ಈ ಮಾಹಿತಿ ನೀಡಿ ಮಾತನಾಡುತ್ತಾ, ನಿರಂತರ ಜ್ಯೋತಿ ದುರ್ಬಳಕೆ ಹಾಗೂ ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ಕಾನೂನು ರೀತಿ ಕಟ್ಟು ನಿಟ್ಟಿನ ಕ್ರಮ ಜರುಗಿಸುವಲ್ಲಿ ತುಮಕೂರು ವಿಭಾಗದ ಬೆಸ್ಕಾಂ ಜಾಗೃತ ದಳ ಪ್ರಗತಿ ಸಾಧಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಎಂ.ವಿ.ಶೇಷಾದ್ರಿ, ಪಿಎಸ್‍ಐ ಮಹಾಲಕ್ಷ್ಮಮ್ಮ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
