ಜನರಲ್ಲಿ ವಿಶ್ವಾಸ ಮೂಡಿಸಿ ಸರ್ಕಾರಿ ಶಾಲೆ ಉಳಿಸಿ

 

 

ದಾವಣಗೆರೆ:

ಗುಣಮಟ್ಟದ ಶಿಕ್ಷಣದ ಕೊರತೆಯಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿ ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿ, ಜನರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ (ವಾಸು) ಕರೆ ನೀಡಿದರು.
ನಗರದ ಹದಡಿ ರಸ್ತೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಬುಧವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಕಳೆದ ಬಜೆಟ್‍ನಲ್ಲಿ ರಾಜ್ಯದ ಸುಮಾರು 9 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕೆಂಬ ಪ್ರಸ್ತಾಪ ಇಡಲಾಗಿದೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಇದಕ್ಕೆ ಆಸ್ಪದೇ ನೀಡದೇ, ಸರ್ಕಾರಿ ಶಾಲೆಗಳನ್ನು ಸದೃಢಗೊಳಿಸಬೇಕಂಬ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ, ವಿದ್ಯಾರ್ಥಿಗಳಲ್ಲಿ ಹಾಗೂ ವಿದ್ಯಾರ್ಥಿ ಪೋಷಕರಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಒಳ್ಳೆಯ ಭಾವನೆ ಬರುವಂತೆ ವಿಶ್ವಾಸ ಮೂಡಿಸಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಬೇಕೆಂದು ಸಲಹೆ ನೀಡಿದರು.
ಶಿಕ್ಷಕರ ಔಚಿತ್ಯವನ್ನು ಅರಿತು, ಡಾ.ಸರ್ವಪಲ್ಲಿ ರಾಧಕೃಷ್ಣ ಅವರು ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಹೇಳಿರುವುದೇ ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯನ್ನು ತೋರಿಸಲಿದೆ. ದೇಶ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ವೃತ್ತಿ ಯಾವುದಾದು ಇದ್ದರೆ, ಅದು ಶಿಕ್ಷಕ ವೃತ್ತಿ ಮಾತ್ರ ಎಂದರು.

ಬರೀ ಆರ್ಥಿಕ ರಂಗದಲ್ಲಿ ಮಾತ್ರವಲ್ಲ, ಎಲ್ಲಾ ರಂಗಗಳಲ್ಲೂ ದೇಶ ಮುಂದುವರೆದರೆ ಮಾತ್ರ ದೇಶದ ಸಮಗ್ರ ಪ್ರಗತಿ ಸಾಧ್ಯವಾಗಲಿದೆ. ಶಿಕ್ಷಕರು ನಿಮ್ಮ ವೃತ್ತಿ ಪಾವಿತ್ರ್ಯತೆಯನ್ನು ಅರಿತು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ, ಮಕ್ಕಳ ವ್ಯಕ್ತಿತ್ವವನ್ನು ವ್ಯವಸ್ಥಿತವಾಗಿ ರೂಪಿಸುವ ಮೂಲಕ ಮಕ್ಕಳು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.
ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸುವುದು, ಹಾಲು ವಿತರಿಸುವುದು ಸೇರಿದಂತೆ ಎಸ್‍ಡಿಎಂಸಿ ಅವರ ಕಿರುಕುಳವನ್ನೂ ಸಹಿಸಿಕೊಂಡು, ಅತೀ ಕಡಿಮೆ ಸೌಲಭ್ಯಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ನಿಮ್ಮ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಹಿಂದೆ ದಂಡಿಸಿ ಶಿಕ್ಷಣ ಕೊಡುವ ವ್ಯವಸ್ಥೆ ಇತ್ತು. ಆದರೆ, ಇಂದು ಮಕ್ಕಳಿಗೆ ಒಂದು ಏಟು ಹೊಡೆದರೆ, ಮಗುವನ್ನು ಕರೆದೊಯ್ದು ಡಾಕ್ಟರ್ ಸರ್ಟಿಫಿಕೇಟ್ ಪಡೆದು, ಶಿಕ್ಷಕರನ್ನು ನಿಂದಿಸುವುದರ ಜೊತೆಗೆ ಕಿರುಕುಳ ಕೊಡುವ ಪೋಷಕರು ಸಹ ಇದ್ದಾರೆ. ಇವೆಲ್ಲವನ್ನೂ ಸಹಿಸಿಕೊಂಡು ಶಿಕ್ಷಣ ನೀಡುತ್ತಿರುವ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಯಾವ ಶಿಕ್ಷಕ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಮಕ್ಕಳಿಗೆ ಅಕ್ಷರ ಕಲಿಸುತ್ತಾರೋ, ಆ ಶಿಕ್ಷಕರ ಮಕ್ಕಳು ಚೆನ್ನಾಗಿರಲಿದ್ದಾರೆ. ಆದ್ದರಿಂದ ಪ್ರಾಮಾಣಿಕ ಸೇವೆ ಸಲ್ಲಿಸಬೇಕೆಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಮಾತನಾಡಿ, ಶಿಕ್ಷಕರು ಒಬ್ಬ ಸಾಮಾನ್ಯ ಮಗುವನ್ನು ಮನುಷ್ಯನಾಗಿ ರೂಪಿಸುವ ಶಿಲ್ಪಿಗಳಿದ್ದಂತೆ. ಹೀಗಾಗಿ ಶಿಕ್ಷಕರು ಅವರವ ಜವಾಬ್ದಾರಿಯನ್ನು ಅರಿತು ಸರಿಯಾಗಿ ನಿಭಾಯಿಸಿದರೆ, ಸಮಾಜವೂ ಚೆನ್ನಾಗಿರಲಿದೆ. ಎಲ್ಲವನ್ನು ಸರಿ ಮಾಡುವ ಶಕ್ತಿ ಇರುವ ಶಿಕ್ಷಕರು ಶಾಲೆಗೆ ಬರುವ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರಿಗೆ ಒಳ್ಳೆಯ ಭವಿಷ್ಯ ರೂಪಿಸಿಕೊಡಬೇಕೆಂದು ಸಲಹೆ ನೀಡಿದರು.

ಮೊದಲು ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಧ್ಯೆ ಇರುವ ವ್ಯತ್ಯಾಸವನ್ನು ಹೋಗಲಾಡಿಸಬೇಕಾಗಿದೆ. ಕೆಲ ಸರ್ಕಾರಿ ಶಾಲೆಗಳು ಮೂಲಭೂತ ಸೌಲಭ್ಯಗಳ ಸಮಸ್ಯೆಯಿಂದ ಬಳಲುತ್ತಿವೆ. ಕೆಲ ಶಾಲೆಗಳಲ್ಲಂತೂ ಇಡೀ ಶಾಲೆಗೆ ಒಬ್ಬರು, ಇಬ್ಬರು ಶಿಕ್ಷಕರಿರುತ್ತಾರೆ. ಹೀಗಿದ್ದಾಗ ಮಕ್ಕಳು ಶಾಲೆಗೆ ಬರಲು ಹೇಗೆ ಸಾಧ್ಯ. ಆದ್ದರಿಂದ ಹೊಸ ಬೆಂಚು, ಟೇಬಲ್, ಕಟ್ಟಡ ನಿರ್ಮಿಸುವುದು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಸರ್ಕಾರವು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲ ಮಾತನಾಡಿ, ಗುರು ಪರಂಪರೆಯನ್ನು ಹೊಂದಿರುವ ಶಿಕ್ಷಕ ಕ್ಷೇತ್ರ ಅತ್ಯಂತ ಶ್ರೇಷ್ಠವಾಗಿದೆ. ರಾಮಾಯಣ-ಮಹಾಭಾರತದ ಕಾಲದಿಂದಲೂ ಗುರುಗಳಿಗೆ ಶ್ರೇಷ್ಠ ಸ್ಥಾನಮಾನಗಳಿವೆ. ಅತ್ಯುನ್ನತ ಶಿಕ್ಷಣ ಸಂಸ್ಥೆ ಹೊಂದಿರುವ ದಾವಣಗೆರೆ ಜ್ಞಾನ ಕಾಶಿಯೇ ಆಗಿದೆ ಎಂದು ಬಣ್ಣಿಸಿದರು.

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ಗಣಕಯಂತ್ರಗಳಿಗೆ ಮಾಹಿತಿಯ ಡೇಟಾ ತುಂಬುವ ರೀತಿಯಲ್ಲಿ ಇಂದಿನ ಶಿಕ್ಷಕರು ಮಗುವಿನಲ್ಲಿ ಮಾಹಿತಿ ತುಂಬುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಪ್ರತಿಯೊಬ್ಬ ಮಗುವಿನಲ್ಲೂ ಸೂಫ್ತ ಪ್ರತಿಭೆ ಅಡಗಿದ್ದು, ಆ ಪ್ರತಿಭೆಯನ್ನು ಗುರುತಿಸಿ, ಹೆಕ್ಕಿ ಹೊರ ತಗೆಯುವವರು ಮಾತ್ರ ನಿಜವಾದ ಗುರುಗಳಾಗಲಿದ್ದಾರೆ. ಇಂಥಹ ಗುರುವಿನ ಸ್ಥಾನದಲ್ಲಿ ಬೇರೊಬ್ಬರನ್ನು ಊಹಿಸಲಾಗುವುದಿಲ್ಲ. ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸುವಂತೆ ಮಾಡುವ ಶಕ್ತಿಯೂ ನಿಮ್ಮಲಿದೆ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಮಾತನಾಡಿ, ಈಗಾಗಲೇ ಶಾಲೆಗಳು ಆರಂಭವಾಗಿ ಅರ್ಧ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿವೆ. ಆದರೂ ಇನ್ನೂ ಎರಡೂ ಪಠ್ಯ ಪುಸ್ತಕಗಳು ಬಂದಿಲ್ಲ. ಹೀಗಾದರೆ, ಮಕ್ಕಳು ಹೇಗೆ ಓದಲು ಸಾಧ್ಯ. ಇದು ಈ ವರ್ಷದ ಕಥೆ ಮಾತ್ರವಲ್ಲ. ಪ್ರತಿ ವರ್ಷವೂ ಪಠ್ಯ ಪುಸ್ತಕಗಳ ಕೊರತೆ ಇದ್ದೇ ಇರುತ್ತೆ. ಆದ್ದರಿಂದ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಪೂರೈಸಲು ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು.
ಮೇಯರ್ ಶೋಭಾ ಪಲ್ಲಾಘಟ್ಟೆ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ತೇಜಸ್ವಿ ಪಟೇಲ್, ಕೆ.ಎಸ್.ಬಸವಂತಪ್ಪ, ಶೈಲಜಾ ಬಸವರಾಜ್ ಮಾತನಾಡಿದರು. ಉಪನ್ಯಾಸಕ ಎಂ.ಬಿ.ನಾಗರಾಜ್ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ 21 ಜನ ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಾದನ ಮಾಡಿ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಸಿಇಒ ಎಸ್.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್, ಪಾಲಿಕೆ ಉಪ ಮೇಯರ್ ಚಮನ್‍ಸಾಬ್, ತಾ.ಪಂ. ಉಪಾಧ್ಯಕ್ಷ ಸಂಗಜ್ಜನಗೌಡ, ಜಿ.ಪಂ. ಸದಸ್ಯೆ ಸಾಕಮ್ಮ ಗಂಗಾಧರ ನಾಯ್ಕ, ಡಯಟ್ ಪ್ರಾಂಶುಲಾಪ ಲಿಂಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪರಮೇಶ್ವರಪ್ಪ ಸ್ವಾಗತಿಸಿದರು.

Recent Articles

spot_img

Related Stories

Share via
Copy link
Powered by Social Snap