ಭೋಪಾಲ್ :
ಕಾರು ಚಲಾಯಿಸುವ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡುವುದರಿಂದ ಜೀವಕ್ಕೇ ಕುತ್ತುಬರಬಹುದು. ಕೆಲವರು ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿರುತ್ತಾರೆ, ಇನ್ನೂ ಕೆಲವರು ವಾಟ್ಸಾಪ್ನಲ್ಲಿ ಚಾಟ್ ಮಾಡುತ್ತಾ ಹೋಗುತ್ತಾರೆ. ಇದರಿಂದ ಚಾಲಕನ ಪ್ರಾಣವೇ ಹೋಗಬಹುದು. ಭೋಪಾಲ್ನ ಕೋಲಾರ ಪ್ರದೇಶದಲ್ಲಿ ಘಟನೆ ನಡೆದಿದೆ. ಚಾಲಕ ಸ್ನ್ಯಾಪ್‌ಚಾಟ್ ಮಾಡುತ್ತಾ ಹೋಗಿ ಕಾರು ಸಮೇತ ನದಿಗೆ ಹಾರಿದ್ದಾರೆ.
ಆರು ಲೇನ್ ಸೇತುವೆಯ ಮೇಲೆ ತಿರುವಿನಲ್ಲಿ ನ್ಯಾವಿಗೇಟ್ ಮಾಡುವಾಗ ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಮೃತರನ್ನು ಕಾರು ಚಲಾಯಿಸುತ್ತಿದ್ದ ವಿನೀತ್ (22) ಮತ್ತು ಪಲಾಶ್ ಗಾಯಕ್ವಾಡ್ (22) ಎಂದು ಗುರುತಿಸಲಾಗಿದೆ. ಪಿಯೂಷ್ ಎಂಬುವವರು ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ವರದಿಗಳ ಪ್ರಕಾರ, ಅಪಘಾತದ ಸಮಯದಲ್ಲಿ ವಿನೀತ್ ಹೆಚ್ಚಿನ ವೇಗದಲ್ಲಿ ಇದ್ದಿದ್ದಷ್ಟೇ ಅಲ್ಲದೆ ಸ್ನ್ಯಾಪ್‌ಚಾಟ್ ಬಳಸುತ್ತಿದ್ದ, ಸೇತುವೆಯ ಮೇಲೆ ತಿರುವು ಪಡೆಯಲು ಪ್ರಯತ್ನಿಸುವಾಗ ಅವರು ವಾಹನದ ನಿಯಂತ್ರಣ ಕಳೆದುಕೊಂಡಿದ್ದ. ಇದರಿಂದಾಗಿ ಕಾರು ತಡೆಗೋಡೆಯಿಂದ ಡಿಕ್ಕಿ ಹೊಡೆದು ಕೆಳಗಿನ ನದಿಗೆ ಬಿದ್ದಿತ್ತು.
ಡಿಕ್ಕಿ ಹೊಡೆದ ನಂತರ ಕಾರಿನ ಬಾಗಿಲು ಲಾಕ್ ಆಗಿದ್ದು, ಮೂವರು ಒಳಗಡೆ ಸಿಲುಕಿದ್ದಾರೆ. ಈ ವೇಳೆ ಪಿಯೂಷ್ ಕಿಟಕಿ ಒಡೆದು ಪರಾರಿಯಾಗಿದ್ದು, ಗಾಯಗೊಂಡಿದ್ದಾರೆ. ಕೂಡಲೇ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರಿನ ಗಾಜುಗಳನ್ನು ಒಡೆದು ವಿನೀತ್ ಮತ್ತು ಪಲಾಶ್ ಅವರ ಮೃತದೇಹಗಳನ್ನು ಹೊರತೆಗೆಯಲು ಪ್ರಯತ್ನಿಸಿದರು. ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದು, ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪಿಯೂಷ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.