ಬೆಂಗಳೂರು:
ನಗರದಲ್ಲಿ ಭಾನುವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಅಪ್ರಾಪ್ತ ವಯಸ್ಕ ಸೇರಿದಂತೆ ಮೂವರು ಕೊಲೆಯಾಗಿದ್ದಾರೆ. ಮೊದಲನೆಯದಾಗಿ ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಿಗೆರೆಯಲ್ಲಿ ಭಾನುವಾರ ಮುಂಜಾನೆ 17 ವರ್ಷದ ಯುವಕನನ್ನು ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಲಾಗಿದೆ. ಮೃತರನ್ನು ಅಬ್ಬಿಗೆರೆ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಶಾಲೆ ಬಿಟ್ಟ ವಿದ್ಯಾರ್ಥಿ ಎನ್ನಲಾಗಿದೆ.
ಅಪರಿಚಿತ ದುಷ್ಕರ್ಮಿಗಳು ಮಂಜುನಾಥ್ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆತನ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲೆಯ ಹಿಂದಿನ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ಪ್ರೇಮ ಕಾರಣ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಗೊಲ್ಲರಹಟ್ಟಿಯಲ್ಲಿ ಕೌಟುಂಬಿಕ ವಿಚಾರದಲ್ಲಿ ಗಲಾಟೆ ನಡೆದು 37 ವರ್ಷದ ವ್ಯಕ್ತಿಯನ್ನು ಭಾನುವಾರ ರಾತ್ರಿ ಅವರ ಮಲತಂದೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಮೃತ ಆನಂದ್ ಪೇಂಟರ್ ಕೆಲಸ ಮಾಡುತ್ತಿದ್ದು, ಆರೋಪಿಯನ್ನು ಪುಟ್ಟಸ್ವಾಮಿ ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ 10.30ರ ಸುಮಾರಿಗೆ ಆನಂದ್ ಮತ್ತು ಪುಟ್ಟಸ್ವಾಮಿ ನಡುವೆ ಮನೆ ಬಾಡಿಗೆ ಕೊಡುವ ವಿಚಾರದಲ್ಲಿ ಜಗಳವಾಗಿದೆ. ಕುಡಿದ ಮತ್ತಿನಲ್ಲಿದ್ದ ಪುಟ್ಟಸ್ವಾಮಿ ಜಗಳ ಆರಂಭಿಸಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಮಗನಿಗೆ ಇರಿದಿದ್ದಾನೆ. ಆತನ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಆನಂದನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು.ಆದರೆ ಅಲ್ಲಿ ಆತ ಸಾವನ್ನಪ್ಪಿರುವುದಾಗಿ ಘೋಷಿಸಲಾಗಿದೆ. ಇವರಿಬ್ಬರು ಆಗಾಗ್ಗೆ ಮನೆಯ ವಿಷಯಗಳ ಬಗ್ಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ.
ಮತ್ತೊಂದು ಘಟನೆಯಲ್ಲಿ 38 ವರ್ಷದ ವ್ಯಕ್ತಿಯನ್ನು ನೆರೆಹೊರೆಯವರು ಕಲ್ಲಿನಿಂದ ತಲೆಗೆ ಒಡೆದು ಕೊಂದಿದ್ದಾರೆ. ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿ ಇರುವ ಪಾರ್ಕ್ ಬಳಿ ಈ ಘಟನೆ ನಡೆದಿದೆ. ಮೃತರನ್ನು ಮಲ್ಲೇಶ್ವರಂ ನಿವಾಸಿ ಮತ್ತು ತಮಿಳುನಾಡು ಮೂಲದ ಪನ್ನೀರ್ ಸೆಲ್ವಂ ಎಂದು ಗುರುತಿಸಲಾಗಿದ್ದು, ಅವರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಲ್ಲೇಶ್ವರಂ ನಿವಾಸಿಗಳಾದ ಪ್ರೇಮಕುಮಾರ್ (21) ಮತ್ತು ಮದನ್ (21) ಆರೋಪಿಗಳು.ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ