ಹೊಸಪೇಟೆ:
ಹಂಪಿ ಉತ್ಸವದ ಸಂದರ್ಭದಲ್ಲಿ ಇಸ್ರೇಲಿ ಪ್ರವಾಸಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಯುವಕರನ್ನು ಹಂಪಿ ಪೊಲೀಸರು ಶನಿವಾರ ತಡರಾತ್ರಿ ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಗಳನ್ನು ಹೊಸಪೇಟೆಯ ಜಿಲ್ಲಾ ಕಾರಾಗೃಹಕ್ಕೆ ರವಾನಿಸಲಾಗಿದೆ.ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಮೂವರನ್ನು ಈ ಹಿಂದೆ ವಶಕ್ಕೆ ಪಡೆದು ತಾಲೂಕು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು, ಬಳಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿತ್ತು.
ಆದರೆ, ಇಸ್ರೇಲಿ ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ್ದರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲಾಗಿರಲಿಲ್ಲ. ಸ್ಥಳೀಯ ಪೊಲೀಸ್ ಮೂಲಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಬಳಿಕ ಮತ್ತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.ಆರೋಪಿಗಳ ವಿರುದ್ಧ ಯಾವ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ ಎಲ್ ಅವರು ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದು, ಲೈಂಗಿಕ ದೌರ್ಜನ್ಯ ಅಥವಾ ಹಲ್ಲೆ ನಡೆದಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.
ಘಟನೆಯ ಕುರಿತು ಮಹಿಳೆ ಪತ್ರ ಬರೆದು ಪೊಲೀಸರಿಗೆ ಸಲ್ಲಿಸಿದ್ದರು, ಕೂಡಲೇ ಪೊಲೀಸರು ಸೆಕ್ಷನ್ 109/110 ರ ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಯುವಕರನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆಗಾಗಿ ಜೈಲಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
