ಬೆಂಗಳೂರು:
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಚನ್ನಪಟ್ಟಣದ ಚುನಾವಣೆ ಕುರಿತು ಲೆಕ್ಕಾಚಾರ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದ್ದ ಬಂಡಾಯದ ಬಿಸಿ ತಣ್ಣಗಾಗಿದೆ. ನವೆಂಬರ್ 13ರಂದು ನಡೆಯುವ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಸಿದ್ದರಾಮಯ್ಯ ಸಚಿವರಿಗೆ ವಿಶೇಷ ಟಾಸ್ಕ್ ನೀಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಭಾನುವಾರ ಸಿಎಂ ನಿವಾಸ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಸಚಿವರು, ಸಂಸದರು, ಶಾಸಕರು ಸೇರಿದಂತೆ 100 ಪ್ರಮುಖ ನಾಯಕರೊಂದಿಗೆ ವರ್ಚುವಲ್ ಸಭೆ ನಡೆಸಿ ಪಕ್ಷದ ಕುರಿತು ಚರ್ಚೆ ನಡೆಸಿದರು.
ಪ್ರತಿ ಕ್ಷೇತ್ರದಲ್ಲಿ ಇಬ್ಬರು “ground Spies” ಒಳಗೊಂಡ ಐದು ಸದಸ್ಯರ ತಂಡಗಳ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿರುತ್ತವೆ, ಈ ತಂಡ ಸಿಎಂ, ಡಿಸಿಎಂ ಮತ್ತು ಸುರ್ಜೆವಾಲಾ ಅವರಿಗೆ ವರದಿ ಮಾಡುತ್ತದೆ, ಪಕ್ಷದ ಅಭ್ಯರ್ಥಿಗಳಿಗಾಗಿ ಕೆಲಸ ಮಾಡುವ ground Spies ತಂಡ ಪ್ರತಿಯೊಬ್ಬ ನಾಯಕರ ಚಲನವಲನಗಳ ಬಗ್ಗೆಮಾಹಿತಿ ನೀಡುತ್ತದೆ. ಯಾವುದೇ ಕಾಂಗ್ರೆಸ್ ನಾಯಕರು ಪ್ರತಿಸ್ಪರ್ಧಿ ನಾಯಕರೊಂದಿಗೆ ಕೈಜೋಡಿಸಿದ್ದಾರೆಯೇ ಎಂದು ಕಂಡುಹಿಡಿಯುವುದು ತಂಡದ ವಿಶೇಷ ಆದೇಶವಾಗಿದೆ.
ಈಗಾಗಲೇ ಶಿಗ್ಗಾಂವ್‌ನ ತಂಡವು ತನ್ನ ವರದಿಯನ್ನು ಸಲ್ಲಿಸಿದ್ದು, ಡಿಸಿಎಂ ತಕ್ಷಣ ಕ್ರಮ ಕೈಗೊಂಡಿದ್ದಾರೆ, ಅಂತಹ ನಾಲ್ವರು ಸ್ಥಳೀಯ ನಾಯಕರನ್ನು ಆದಷ್ಟು ಬೇಗ ಅವರನ್ನು ಭೇಟಿ ಮಾಡಲು ಕರೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪದಾಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಉಪ ಚುನಾವಣೆ ಸಿದ್ಧತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಸಿಎಂ, ಡಿಸಿಎಂ ನೇತೃತ್ವದಲ್ಲಿ ಕರೆದಿದ್ದ ಸಭೆಗೆ ಸಚಿವರು ಹಾಗೂ ಶಾಸಕರು ದೊಡ್ಡ ಮಟ್ಟದಲ್ಲಿ ಗೈರಾಗಿದ್ದಾರೆ.
ಈ ವಿದ್ಯಮಾನದಿಂದ ಹೈಕಮಾಂಡ್ ಕೆಂಡಾಮಂಡಲವಾಗಿದ್ದು, ಪಕ್ಷದ ಕೆಲಸ ಮಾಡಲು ಆಸಕ್ತಿ ತೋರದವರಿಗೆ ಬಿಸಿ ಮುಟ್ಟಿಸುವಂತೆ ಕೆಪಿಸಿಸಿಗೆ ತಾಕೀತು ಮಾಡಿದೆ.ಹಾಗಿದ್ದರೂ ಸಚಿವರಲ್ಲಿ ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಎನ್.ಚಲುವರಾಯಸ್ವಾಮಿ, ಲಕ್ಷ್ಮೀ ಹೆಬ್ಬಾಳಕರ್ ಸೇರಿ ಕೆಲವರು ಮಾತ್ರ ಸಭೆಯಲ್ಲಿದ್ದರು. ಶಾಸಕರ ಸಂಖ್ಯೆಯೂ ಬಹಳ ಕಡಿಮೆಯಿತ್ತು. ಆಡಳಿತಾರೂಢ ಶಾಸಕರ ಪೈಕಿ ಅರ್ಧದಷ್ಟು ಮಂದಿಯೂ ಹಾಜರಾಗಿರಲಿಲ್ಲ. ಉಳಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಪದಾಧಿಕಾರಿಗಳಿದ್ದರು ಎನ್ನಲಾಗಿದೆ.
ಸಚಿವರು ಹಾಗೂ ಶಾಸಕರ ಈ ನಿರಾಸಕ್ತಿಯನ್ನು ಗಮನಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತೀವ್ರವಾಗಿ ಆಕ್ಷೇಪಿಸಿದರು. ಇಷ್ಟು ಮಹತ್ವದ ಸಭೆಗೆ ಗೈರು ಹಾಜರಾಗುತ್ತಾರೆಂದರೆ ಇವರಾರಿಗೂ ಪಕ್ಷದ ಕೆಲಸ ಬಗ್ಗೆ ಕಾಳಜಿಯಿಲ್ಲ ಎಂದಾಯಿತು. ಎಲ್ಲರ ಅನುಕೂಲದ ದೃಷ್ಟಿಯಿಂದಲೇ ವಿಡಿಯೋ ಸಂವಾದ ಏರ್ಪಡಿಸಲಾಗಿತ್ತು. ಇಷ್ಟಾದರೂ ಸಭೆಯಲ್ಲಿ ಪಾಲ್ಗೊಳ್ಳುವ ಸೌಜನ್ಯವಿಲ್ಲವೆಂದರೆ ಹೇಗೆ? ಎಂದು ಸುರ್ಜೇವಾಲ ಖಾರವಾಗಿ ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಾಯಕರು ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಸಿದ್ದರಾಮಯ್ಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಚಿವರು, ಶಾಸಕರು ಮತ್ತು ಸಂಸದರು ತಮ್ಮ ತಮ್ಮ ಪ್ರದೇಶಗಳ ಕ್ಷೇತ್ರಗಳೊಂದಿಗೆ ತೊಡಗಿಸಿಕೊಳ್ಳುವ ಕಾರ್ಯವನ್ನು ಸಭೆಯಲ್ಲಿ ನೀಡಲಾಯಿತು.