ಚಿಕ್ಕಬಳ್ಳಾಪುರ:
ಭೀಕರ ಅಪಘಾತವೊಂದರಲ್ಲಿ ಕಾರು ಕಾಲುವೆಗೆ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಬಳಿ ನಡೆದಿದೆ.
ಅಪಘಾತದ ತೀವ್ರತೆಗೆ ಪ್ರಯಾಣಿಕರೊಬ್ಬರ ಶವ ಮರದಲ್ಲಿ ನೇತಾಡುತ್ತಿದ್ದುದು ಕಂಡುಬಂದಿದ್ದು, ಇದನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ.ಮೃತಪಟ್ಟವರು ಬೆಸ್ಕಾಂ ಸಿಬ್ಬಂದಿ ಎಂದು ತಿಳಿದುಬಂದಿದೆ. ಇವರನ್ನು ಕೆಪಿಟಿಸಿಎಲ್ ವೇಣಗೋಪಾಲ್ (34), ಶ್ರೀಧರ್ (35) ಹಾಗೂ ಬೆಸ್ಕಾಂ ಲೈನ್‌ಮ್ಯಾನ್ ಮಂಜಪ್ಪ (35) ಎಂದು ಗುರುತಿಸಲಾಗಿದೆ.
ರಾತ್ರಿಯೇ ಅಪಘಾತ ನಡೆದಿದೆ ಎಂದು ಶಂಕಿಸಲಾಗಿದ್ದು, ಮುಂಜಾನೆವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಬ್ರೆಝಾ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಲುವೆಗೆ ಉರುಳಿಕೊಂಡಿದೆ. ಕಾರಿನಲ್ಲಿ ನಾಲ್ವರಿದ್ದು, ಮೂವರು ಮೃತಪಟ್ಟಿದ್ದಾರೆ. ಒಬ್ಬ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಕಾಲುವೆಗೆ ಉರುಳುವಾಗ ಬಾಗಿಲು ತೆರೆದ ಕಾರಿನಿಂದ ಒಬ್ಬ ಪ್ರಯಾಣಿಕನ ದೇಹ ಮರದಲ್ಲಿ ಸಿಕ್ಕಿಹಾಕಿಕೊಂಡಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.