ಬಿಜಾಪುರ:
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 12 ನಕ್ಸಲೀಯರನ್ನು ಹೊಡೆದುರುಳಿಸಲಾಗಿದೆ. ಇದರೊಂದಿಗೆ ಈ ವರ್ಷ ರಾಜ್ಯದಲ್ಲಿ ಇದುವರೆಗೆ ಹತ್ಯೆಯಾದ ನಕ್ಸಲೀಯರ ಸಂಖ್ಯೆ 103 ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಮಾವೋವಾದಿಗಳು ನಡೆಸಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ಕಳೆದ ಒಂದು ತಿಂಗಳಲ್ಲಿ ಭದ್ರತಾ ಪಡೆಗಳು ನಕ್ಸಲೀಯರ ಮೇಲೆ ನಡೆಸಿದ ಮೂರನೇ ಪ್ರಮುಖ ದಾಳಿ ಇದಾಗಿದೆ. ಕಳೆದ ಮೂರು ವಾರಗಳ ಹಿಂದೆ ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 29 ಉಗ್ರರನ್ನು ಹತ್ಯೆಗೈಯಲಾಗಿತ್ತು.
ಬಿಜಾಪುರದಲ್ಲಿ ನಡೆದ ಯಶಸ್ವಿ ದಾಳಿಗಾಗಿ ಭದ್ರತಾ ಪಡೆಗಳು ಮತ್ತು ಹಿರಿಯ ಅಧಿಕಾರಿಗಳನ್ನು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಅಭಿನಂದಿಸಿದ್ದಾರೆ.
ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಡಿಯಾ ಗ್ರಾಮದ ಬಳಿಯ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬಿಜಾಪುರ, ದಾಂತೇವಾಡ ಮತ್ತು ಸುಕ್ಮಾ ಜಿಲ್ಲೆಗಳ ಜಿಲ್ಲಾ ಮೀಸಲು ಗಾರ್ಡ್‌ಗೆ (ಡಿಆರ್‌ಜಿ) ಸೇರಿದ ಸಿಬ್ಬಂದಿ, ಬಸ್ತಾರ್ ಫೈಟರ್ಸ್, ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ಭಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ರಾಯಪುರದಿಂದ 450 ಕಿಮೀ ದೂರದಲ್ಲಿರುವ ಪಿಡಿಯಾ ಬಳಿಯ ಕಾಡಿನಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಎರಡು ಕಡೆಯ ನಡುವೆ ಎನ್‌ಕೌಂಟರ್ ನಡೆಯಿತು ಮತ್ತು ನಂತರ ವಿವಿಧ ಸ್ಥಳಗಳಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಅವರು ಹೇಳಿದರು.