ಬೆಂಗಳೂರು:
ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ರಾಜ್ಯದಾದ್ಯಂತ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಯ ಹೊರತಾಗಿಯೂ ಕಳೆದ ಒಂದು ವರ್ಷದಲ್ಲಿ ಮೆಟ್ರೋ ರೈಲಿನ ಪ್ರಯಾಣಿಕರ ಸಂಖ್ಯೆ ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವು ಮೆಟ್ರೋ ರೈಲಿನ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ರಾಮಲಿಂಗಾ ರೆಡ್ಡಿ ಈ ರೀತಿ ತಿರುಗೇಟು ನೀಡಿದ್ದಾರೆ.
ರೆಡ್ಡಿ ಪ್ರಕಾರ, ಜೂನ್ 11, 2023 ರಂದು ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಲಾಯಿತು ಮತ್ತು ಅಂದಿನಿಂದ ನಗರದಲ್ಲಿ ಮೇ 20 ರವರೆಗೆ 67.34 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ.
ಇನ್ನು ಕಳೆದ ಒಂದು ವರ್ಷದಲ್ಲಿ ನಮ್ಮ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯು ಶೇಕಡಾ 30 ರಷ್ಟು ಹೆಚ್ಚಾಗಿದೆ. ಜನವರಿ 2023 ರಲ್ಲಿ, ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ 1.65 ಕೋಟಿ ಇತ್ತು ಮತ್ತು ಆದಾಯ 39.15 ಕೋಟಿ ಆಗಿತ್ತು. ಏಪ್ರಿಲ್ 2024 ರಲ್ಲಿ, ಪ್ರಯಾಣಿಕರ ಸಂಖ್ಯೆ ಎರಡು ಕೋಟಿಗೆ ಏರಿದ್ದು, ಆದಾಯವು 51.71 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಸಚಿವರು ಪ್ರಕಟಣೆಲ್ಲಿ ತಿಳಿಸಿದ್ದಾರೆ.
ಅವರ ಪ್ರಕಾರ, 2023ಕ್ಕೆ ಹೋಲಿಸಿದರೆ 2024 ರಲ್ಲಿ ಪ್ರಯಾಣಿಕರ ಸಂಖ್ಯೆ ತಿಂಗಳಿಗೆ 35 ಲಕ್ಷ ಹೆಚ್ಚಳವಾಗಿದೆ ಮತ್ತು ತಿಂಗಳಿಗೆ 1.10 ಕೋಟಿ ರೂಪಾಯಿ ಆದಾಯ ಹೆಚ್ಚಾಗಿದೆ.
ಈ ಅಂಕಿ ಅಂಶಗಳಿಂದ ಮೆಟ್ರೋ ರೈಲಿಗೆ ಶಕ್ತಿ ಯೋಜನೆಯಿಂದ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಬದಲಾಗಿ, ಮೆಟ್ರೋ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿಯವರು ಪೂರ್ವಾಗ್ರಹ ಪೀಡಿತರಾಗಿರುವುದು ಮತ್ತು ಯೋಜನೆಯನ್ನು ದೂಷಿಸುವುದು ಸರಿಯಲ್ಲ. ಬಿಜೆಪಿ ಘೋಷಿಸಿದ ಯೋಜನೆಗಳು ಮಾತ್ರ ಒಳ್ಳೆಯದು ಎಂದು ಜನರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಆದರೆ ಜನರಿಗೆ ಸತ್ಯ ತಿಳಿದಿದೆ ಎಂದು ಸಾರಿಗೆ ಸಚಿವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.