ಬೆಂಗಳೂರು:
ಸಿಇಟಿ ಫಲಿತಾಂಶ ಪ್ರಕಟಿಸಲು ಸರ್ಕಾರ ವಿಳಂಬ ಮಾಡುವ ಮೂಲಕ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಕೂಲ ಮಾಡಿಕೊಟ್ಟಿದ್ದು, ಇದು ಸುಮಾರು 3 ಸಾವಿರ ಕೋಟಿ ರೂ.ಗಳ ಹಗರಣವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ನಗರದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಅವರು, ಸಿಇಟಿ ಪರೀಕ್ಷೆ ಮುಗಿದು ಸುಮಾರು 42 ದಿನ ಆಗಿದೆ. ಆದರೆ, ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಕೇವಲ ಮೂರು ಗಂಟೆಗಳಲ್ಲಿ ವಿಟಿಯು ಅಂತಹ ಸಂಸ್ಥೆಯು ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಂಡು ಫಲಿತಾಂಶಗಳನ್ನು ಪ್ರಕಟಿಸುತ್ತಿದೆ. ಆದರೆ, ಸಿಇಟಿ ಪರೀಕ್ಷಾ ಫಲಿತಾಂಶ ಇದುವರೆಗೂ ಪ್ರಕಟಿಸದೆ ಇರುವುದರಿಂದ ದೊಡ್ಡ ಹುನ್ನಾರವಿದೆ. ಈಗಾಗಲೇ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಉನ್ನತ ಶಿಕ್ಷಣ ಇಲಾಖೆ ಅನುಮತಿ ನೀಡಿದೆ ಎಂದು ಹೇಳಿದರು.
ಇದು ಸುಮಾರು ರೂ.3000 ಕೋಟಿ ಹಗರಣವಾಗಿದೆ. 60,000 ಸೀಟುಗಳನ್ನು ಇಂದು ಮಾರಾಟಕ್ಕೆ ಇಡಲಾಗಿದೆ. ಒಂದು ಚೀಟಿಗೆ 3 ಲಕ್ಷದಿಂದ 25 ಲಕ್ಷಗಳವರೆಗೆ ಮಾರಾಟ ಮಾಡುತ್ತಿದ್ದಾರೆ. ಎಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರಿ ಸೀಟು ಸಿಗುತ್ತದೋ, ಇಲ್ಲವೋ ಎಂದು ನಾಲ್ಕೈದು ಕಾಲೇಜುಗಳಿಗೆ ಹೋಗಿ ಅರ್ಜಿ ಹಾಕುತ್ತಿದ್ದಾರೆ, ಒಂದು ಅಪ್ಲಿಕೇಶನ್‌ಗೆ ಸುಮಾರು ರೂ.1200 ವಸೂಲಿ ಮಾಡುತ್ತಿವೆ. ಒಂದು ಖಾಸಗಿ ಕಾಲೇಜಿನಲ್ಲಿ 35,000 ಅರ್ಜಿಗಳನ್ನು ಮಾರಾಟ ಮಾಡಿದ್ದು, ಒಂದು ಅಪ್ಲಿಕೇಶನ್‌ಗೆ ರೂ.1200 ರೂಪಾಯಿ ಆದರೆ, ಸುಮಾರು ರೂ.4.80 ಕೋಟಿ ಅರ್ಜಿಯಿಂದಲೇ ಬಾಚಿಕೊಂಡಿದೆ ಎಂದು ಹೇಳಿದರು.
ಸಿಇಟಿ ಫಲಿತಾಂಶ ಪ್ರಕಟಿಸುವ ಮುನ್ನವೇ ಖಾಸಗಿ ಕಾಲೇಜುಗಳಿಗೆ ಪ್ರವೇಶ ಪ್ರಕ್ರಿಯೆಗೆ ಸರ್ಕಾರ ಅನುಮತಿ ನೀಡಿರುವುದು ಯಾಕೆ? ಲಕ್ಷ ಲಕ್ಷ ಹಣ ಕಟ್ಟಿ ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆದು, ಸರ್ಕಾರಿ ಹಾಗೂ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಸೀಟು ಸಿಕ್ಕಿದರೆ, ಪ್ರತಿಯೊಬ್ಬ ಪೋಷಕರು ಕಟ್ಟಿದ್ದ ಲಕ್ಷಾಂತರ ರೂಪಾಯಿಗಳು ವಾಪಸ್ ಬರುವುದಿಲ್ಲ. 4-5 ಲಕ್ಷ ಕಟ್ಟಿ, ಎರಡನೇ ಹಾಗೂ ಇನ್ನುಳಿದ ಸುತ್ತಿನಲ್ಲಿ ಉಚಿತ ಸೀಟು ಪಡೆದರೆ ಅವರು ಕಟ್ಟಿರುವ ಹಣದ ಗತಿಯೇನು? ರಾಷ್ಟ್ರ ಮಟ್ಟದಲ್ಲಿ ನಡೆಯುವ ಅನೇಕ ಪರೀಕ್ಷೆಗಳು ಒಂದೆರಡು ವಾರದಲ್ಲಿ ಫಲಿತಾಂಶ ಘೋಷಣೆ ಮಾಡಲಾಗುತ್ತದೆ. ಆದರ, ಸಿಇಟಿ ಪರೀಕ್ಷೆ ನಡೆದು ಒಂದೂವರೆ ತಿಂಗಳಾದರೂ ಇನ್ನೂ ಫಲಿತಾಂಶ ಘೋಷಣೆಯಾಗದಿರುವುದು ಸಾಕಷ್ಟು ಅನುಮಾನ ಮೂಡಿಸಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
