ಬೆಂಗಳೂರು:
ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನಗಳಲ್ಲಿ 3,000 ಕ್ಕೂ ಹೆಚ್ಚು ಉಚಿತ ವೈ-ಫೈ ವಲಯಗಳನ್ನು ಹೊಂದಲಿದ್ದು, ಬಳಿಕ ಯೋಜನೆಯು ರಾಜ್ಯದ ಇತರೆ ಭಾಗಗಳಿಗೂ ವಿಸ್ತರಣೆಯಾಗುವ ನಿರೀಕ್ಷೆಗಳಿವೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ನಿನ್ನೆಯಷ್ಟೇ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಉಚಿತ ವೈ-ಫೈ ಸೇವೆ ಕುರಿತು ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಸಚಿವರು, ಯೋಜನೆ ಹಿನ್ನೆಲೆಯಲ್ಲಿ ಇಲಾಖೆಯು ಬ್ರಾಡ್‌ಬ್ಯಾಂಡ್ ಪೂರೈಕೆದಾರರು ಮತ್ತು ಟೆಲಿಕಾಂ ಕಂಪನಿಗಳೊಂದಿಗೆ ಸಂಪರ್ಕಿಸಲು ಮತ್ತು ಚರ್ಚಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
“ಸರ್ಕಾರಕ್ಕೆ ಯೋಜನೆಯ ವೆಚ್ಚ ಬಹುತೇಕ ಶೂನ್ಯವಾಗಿರುತ್ತದೆ. ವರದಿಗಳ ಪ್ರಕಾರ ಬೆಂಗಳೂರಿಗೆ ಕನಿಷ್ಠ 3,000 ವೈ-ಫೈ ಸ್ಪಾಟ್‌ಗಳ ಅಗತ್ಯವಿದೆ. ಈ ಯೋಜನೆಯನ್ನು ಮೊದಲು ಮಾರುಕಟ್ಟೆ, ಮೆಟ್ರೋ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಂತಹ ಹೆಚ್ಚು ಜನರಿರುವ ಪ್ರದೇಶಗಳಲ್ಲಿ ಪರಿಚಯಿಸಲಾಗುತ್ತದೆ. ಆಟೋ ಬುಕ್ಕಿಂಗ್ ಸೇರಿದಂತೆ ಹೆಚ್ಚಿನ ಸೇವೆಗಳಿಗೆ ಇಂಟರ್ನೆಟ್ ಅಗತ್ಯವಿರುವುದರಿಂದ, ಈ ಉಪಕ್ರಮವು ಸಾರ್ವಜನಿಕರಿಗೆ ಸಹಾಯಕವಾಗಲಿದೆ. ಒಮ್ಮೆ ಬೆಂಗಳೂರು ವ್ಯಾಪ್ತಿಗೆ ಬಂದರೆ ಬೇರೆ ಬೇರೆ ಜಿಲ್ಲೆಗಳಿಗೂ ಯೋಜನೆಯನ್ನು ವಿಸ್ತರಿಸಬಹುದು ಎಂದು ತಿಳಿಸಿದರು.
2014ರಲ್ಲಿಯೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಮತ್ತು ಕಲಬುರಗಿಯಲ್ಲಿ ಇದೇ ರೀತಿಯ ಉಪಕ್ರಮ ಕೈಗೊಳ್ಳಲಾಗಿತ್ತು. ಈ ಯೋಜನೆಯನ್ನು ಈಗಾಗಲೇ MG ರಸ್ತೆಯಲ್ಲಿ ಪ್ರಾರಂಭಿಸಲಾಗಿದೆ. ಡೌನ್‌ಲೋಡ್ ಮಾಡಬಹುದಾದ ಡೇಟಾ ಮಿತಿ 50 MB ನೀಡಲಾಗಿದೆ. ಬಳಕೆದಾರರಿಗೆ ಮೂರು ಗಂಟೆಗಳ ಉಚಿತ ಬ್ರೌಸಿಂಗ್ ಅನ್ನು ನೀಡಲಾಗಿದೆ.